ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧. ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.
ಕನ್ನಡ ಸಂಧಿಗಳು: ಲೋಪಸಂಧಿ, ಆಗಮ ಸಂಧಿ, ಆದೇಶಸಂಧಿ
ಉದಾಹರಣೆಗಳು: -
ಲೋಪ - ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ.
ಆಗಮ - ಕೈಯನ್ನು, ಮಳೆಯಿಂದ, ಶಾಲೆಯಲ್ಲಿ, ಮರವನ್ನು, ಮಗುವಿಗೆ.
ಆದೇಶ - ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು.
೨. ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ.
ಸಂಸ್ಕೃತ ಸ್ವರ ಸಂಧಿಗಳು : ಸವರ್ಣದೀರ್ಘ ಸಂಧಿ, ಗುಣಸಂಧಿ, ವೃದ್ಧಿಸಂಧಿ, ಯಣ್‌ಸಂಧಿ
ಸಂಸ್ಕೃತ ವ್ಯಂಜನ ಸಂಧಿಗಳು : ಜಶ್ತ್ವಸಂಧಿ, ಶ್ಚುತ್ವಸಂಧಿ, ಅನುನಾಸಿಕ ಸಂಧಿ
೩. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.
ಸುರಾಸುರ = ಸುರ + ಅಸುರ - ಸವರ್ಣಧೀರ್ಘಸಂಧಿ
ಬಲ್ಲೆನೆಂದು = ಬಲ್ಲೆನು + ಎಂದು - ಲೋಪಸಂಧಿ
ಸೂರ್ಯೋದಯ = ಸೂರ್ಯ + ಉದಯ - ಗುಣಸಂಧಿ
ಮಳೆಗಾಲ = ಮಳೆ + ಕಾಲ - ಆದೇಶಸಂಧಿ
ಅಷ್ಟೈಶ್ವರ್ಯ = ಅಷ್ಟ + ಐಶ್ವರ್ಯ = ವೃದ್ಧಿಸಂಧಿ
ವೇದಿಯಲ್ಲಿ = ವೇದಿ + ಅಲ್ಲಿ - ಆಗಮಸಂಧಿ
ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ.
೧. ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ಜೋಡುನುಡಿ
೨. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನಸಂಧಿ
೩. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ದ್ವಿರುಕ್ತಿ
೪. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ತ್ವಸಂಧಿ
ಇ) ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ತಾಳಿದವನು ಬಾಳಿಯಾನು / ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?
* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.
* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ಅತಿಯಾಗಿ ಕೋಪಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
* ಕೋಪಂ ಅನರ್ಥ ಸಾಧನಂ ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟುಮಾಡುತ್ತದೆ. ಕ್ಷಣಕಾಲ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನೂ ಅಪಾಯಕ್ಕೆ ನೂಕುತ್ತದೆ. ’ಒಬ್ಬ ವ್ಯಕ್ತಿಯನ್ನು ನಾಶ ಪಡಸಬೇಕೆಂದರೆ ಆತನು ಕೋಪಗೊಳ್ಳಿವಂತೆ ಮಾಡಬೇಕು’ ಎಂಬ ಮಾತಿದೆ. ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತೆ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ. ಆದರೆ ಅದನ್ನು ಸರಿಪಡಿಸಲಾಗುತ್ತದೆಯೇ? ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದ ನಂತರ ಚಿಂತಿಸಿದರೆ ಮತ್ತೆ ಸರರಿಂiಗುತ್ತದೆಯೇ? ಆದ್ದರಿಂದ ’ತಾಳ್ಮೆಯಿಂದ ಆಲೋಚಿಸಿ, ಕೋಪವನ್ನು ಹಿಂದಿಕ್ಕಿ ಮುನ್ನಡೆದವರೇ ಜೀವನದಲ್ಲಿ ವಿಜಯಶಾಲಿಗಳಾಗಲು ಸಾಧ್ಯ.’ ಎಂಬುದು ಈ ಗಾದೆಯ ಆಶಯವಾಗಿದೆ.
೨. ಮನಸಿದ್ದರೆ ಮಾರ್ಗ.
ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅ೦ಶಗಳು ಮುಖ್ಯ - ಒ೦ದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪ್ರಯತ್ನ, ಸಾಮರ್ಥ್ಯ-ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ. ಸಾಮರ್ಥ್ಯಕ್ಷಮತೆಗಳಿದ್ದರೂ ಮನಸ್ಸು-ಪ್ರಯತ್ನಗಳಿರದಿದ್ದರೆ ಕೆಲಸ ಹೇಗೆ ಸಾಧ್ಯ ವಾದೀತು? ಒ೦ದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ, ಪ್ರಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವ೦ತರಾಗಿದ್ದರೂ, ಮಸಸ್ಸಿಟ್ಟು ಪ್ರಯತ್ನಿಸದೇ ಇರುವುದರಿ೦ದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊ೦ಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಅನುತ್ತೀರ್ಣಪಾಗುವವರೂ ಇದ್ದಾರೆ.
ಒ೦ದು ಸೂಕ್ತಿ ಇದೆ - 'ಹೊರಟರೆ ಇರುವೆಯೂ ನೂರು ಯೋಜನೆ ಹೋಗುತ್ತದೆ, ಹೊರಡದಿದ್ದರೆ ಗರುಡನೂ ಒ೦ದು ಹೆಜ್ಜೆ ಮು೦ದೆ ಹೋಗುವುದಿಲ್ಲ, ಇದ್ದಲ್ಲಿಯೇ ಇರುತ್ತಾನೆ. ಈ ಸೂಕ್ತಿಯು ಕಲಸ ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ಎ೦ಬುದನ್ನು ಹೇಳುತ್ತದೆ. 'ಮನಸ್ಸಿದ್ದರೆ ಮಹಾದೇವ' ಎನ್ನುವ ಗಾದೆಯೂ, ಇಂಗ್ಲಿಷಿನಲ್ಲಿ "Where there is a will there is a way" ಎಂಬ ಮಾತೂ ಇದೇ ಅರ್ಥವನ್ನು ನೀಡುತ್ತವೆ.
**********