ಪುಟಗಳು

14 ಸೆಪ್ಟೆಂಬರ್ 2019

ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಹೆಚ್ಚು ಅಂಕ ಗಳಿಸುವುದು ಹೇಗೆ?


   ಮೊದಲೆಲ್ಲ ತೂಕ ಮಾಡಲು ತಕ್ಕಡಿ-ಕಲ್ಲುಗಳು, ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಕೆ.ಜಿ ಕೆ.ಜಿಯೇ. ಆದರೆ ಈಗ ಹಾಗಿಲ್ಲ. ಡಿಜಿಟಲ್‌ ಮಾಪಕಗಳು.ಕೆ.ಜಿಯೆಂದರೆ ಒಂದು ಮಿಲಿ ಗ್ರಾಂ ಕೂಡ ಕಡಿಮೆ ಆಗುವ ಹಾಗಿಲ್ಲ. ಅಂದರೆ ಪ್ರತಿ ಮಿಲಿ ಗ್ರಾಂ ಗೂ ಅದರದ್ದೇ ಆದ ಬೆಲೆ ಇದೆ.
   ಈ ಮಾತು ಇಲ್ಲಿ ಯಾಕೆಂದರೆ ಮುಂಚೆಲ್ಲ ಯಾವುದೇ ಪರೀಕ್ಷೆಯಲ್ಲಿ ಫಲಿತಾಂಶ ಬಂದರೆ 'ಫಸ್ಟ್‌ ಕ್ಲಾಸೋ' 'ಸೆಕೆಂಡ್ ಕ್ಲಾಸೋ' ಅಷ್ಟೇ ಮುಖ್ಯವಾಗುತ್ತಿತ್ತು. ಈಗ ಹಾಗಿಲ್ಲ ಶೇಕಡ ಅಂಕಗಳೇ ಮುಖ್ಯ. ಅದರಲ್ಲೂ 'ನೂರಕ್ಕೇ ನೂರು' ಅಂಕ ಬಂದರೇನೇ ತೃಪ್ತಿ! ಹಿಂದೆಲ್ಲ ಶೇ ೭೦-೮೦ ಅಂಕಗಳು ಬಂದರೆ  ಅದೇ ಬಹು ದೊಡ್ಡ ಸಾಧನೆ! ಇದೀಗ ಪಿಯುಸಿಯಲ್ಲಿ ೬೦೦ ಕ್ಕೆ ೬೦೦, ಎಸ್.ಎಸ್.ಎಲ್.ಸಿ ಯಲ್ಲಿ ೬೨೫ ಕ್ಕೆ ೬೨೫ ಕೂಡ ಸಾಮಾನ್ಯವಾಗಿಬಿಟ್ಟಿದೆ.
   "ಶಿಕ್ಷಣ ಪಡೆಯಲು ಶಾಲೆಗೆ ಹೋದರಾಯಿತು" ಎನ್ನುವ ಮನಸ್ಥಿತಿ ಇಂದು ಪಥ್ಯವಾಗದು. ಇದು ಸ್ಪರ್ಧಾತ್ಮಕ ಯುಗ. "ಹಲವರಲ್ಲಿ ನಾನೊಬ್ಬ ಉತ್ತಮ" ಎನಿಸಿಕೊಂಡರೂ ಈಗ ಫಲವಿಲ್ಲ. "ಹಲವು ಉತ್ತಮರಲ್ಲಿ ನಾನೊಬ್ಬ ಅತ್ಯುತ್ತಮ" ಎನಿಸಿಕೊಂಡರೇನೇ ಬೆಲೆ. ಇಂತಹ ಶೈಕ್ಷಣಿಕ ಕಾಲಘಟ್ಟದಲ್ಲಿ ನಮ್ಮ ಕಲಿಕೆ,ಓದು ಹೇಗಿರಬೇಕೆಂಬ ಬಗ್ಗೆ ಯೋಚಿಸಬೇಕಾದ ಅಗತ್ಯ ಇಂದು ನಮ್ಮ ಮುಂದಿದೆ.
ಆತ್ಮೀಯ ವಿದ್ಯಾರ್ಥಿಗಳೇ ಮಾಜಿ ರಾಷ್ಟಪತಿ 'ಕ್ಷಿಪಣಿ ಮಾನವ' ದಿ| ಎ.ಪಿ.ಜೆ ಅಬ್ದುಲ್ ಕಲಾಮ್ ಅವರು ಹೇಳಿದಂತೆ ಒಳ್ಳೆಯ ಕನಸನ್ನು ಕಾಣಬೇಕು. ಅದರ ನನಸಿಗಾಗಿ ಅವಿರತ ಶ್ರಮಿಸಬೇಕು. ಅಂದರೆ ನಮ್ಮ ಜೀವನದ ಗುರಿಯನ್ನು ನಾವು ನಿರ್ಧರಿಸಿ ಮುನ್ನಡೆಯ ಬೇಕು. ಆ ಗುರಿಯ ಸಾಧನೆಗೆ ಏನೆಲ್ಲ ಮಾಡಬೇಕೋ ಅವನ್ನೆಲ್ಲ ಶ್ರದ್ಧೆಯಿಂದ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಕಲಿಕೆಯೊಂದಿಗೆ ಹೆಚ್ಚು ಅಂಕ ಗಳಿಸಬೇಕು ಎಂಬ ಆಸೆಯೇ ನಿಮ್ಮ ಭವಿಷ್ಯದ ಗುರಿಗೆ ಮೊದಲ ಹೆಜ್ಜೆಯಾಗುತ್ತದೆ.

ಹಾಗಾದರೆ ಹೆಚ್ಚು ಅಂಕ ಗಳಿಸಲು ಏನೆಲ್ಲ ಕಸರತ್ತು ಮಾಡಬೇಕೆಂಬ ಬಗ್ಗೆ ಯೋಚಿಸೋಣ. "ಶಿಕ್ಷಣ ಸಂಸ್ಥೆಗೆ ನಾವು ಬಂದಿರುವುದು ಯಾತಕ್ಕಾಗಿ" ಎಂಬ ಅರಿವು ನಮಗಿರಲೇ ಬೇಕು. ಕಲಿಕೆಯ ವಿಷಯವನ್ನು ಬಿಟ್ಟು ಇತರೆ ವಿಷಯಗಳ ಕಡೆ ಮನಸ್ಸು ಹರಿಯುವುದನ್ನು ಮೊದಲು ನಿಯಂತ್ರಿಸಿಕೊಳ್ಳಬೇಕು. ಇದಕ್ಕೆ 'ಯೋಗ' , 'ಪ್ರಾಣಾಯಾಮ' ಸಹಾಯಕವಾಗಬಲ್ಲದು ಪ್ರಯತ್ನಿಸಿ. ಕೇವಲ ಓದು ಬರೆಹ ಬೇಸರ ತರಿಸ ಬಹುದು. ಲಘು ವ್ಯಾಯಾಮ, ಆಟ,ಗ್ರಂಥಾಲಯದ ಪುಸ್ತಕಗಳನ್ನು ಓದುವುದು ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಬಿಡುವಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈ ಬೇಸರವನ್ನು ನೀಗಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಅತಿಯಾಗಿ ಟಿ.ವಿ,ಮೊಬೈಲ್ ಸಹವಾಸ ಬೇಡವೇ ಬೇಡ.
"ವಿದ್ಯೆ ಸಾಧಕನ ಸೊತ್ತೆ ಹೊರತು ಸೋಮಾರಿಯ ಸೊತ್ತಲ್ಲ" ಈ ಮಾತಿನ ಅರಿವು ನಿಮಗಿರಲಿ. ಮಕ್ಕಳೇ, ಮೊದಲು ನಿಮ್ಮ ನಿದ್ದೆಗೆ ಕಡಿವಾಣ ಹಾಕಲೇ ಬೇಕು. ನಿಮ್ಮ ವಯಸ್ಸಿಗೆ ದಿನಕ್ಕೆ ಕೇವಲ ೬ ರಿಂದ ೭ ಗಂಟೆ ನಿದ್ದೆ ಸಾಕಷ್ಟಾಗುತ್ತದೆ ಎಂಬುದು ಮನೋವಿಜ್ಞಾನಿಗಳು ಹೇಳುವ  ಮಾತು. ಅತೀ ನಿದ್ದೆ ನಮ್ಮನ್ನು ಆಲಸಿಗಳನ್ನಾಗಿ ಮಾಡುತ್ತದೆ ಎಂಬುದು ತಿಳಿದಿರಲಿ. ಮುಂಜಾವಿನ ಪ್ರಶಾಂತ ವಾತಾವರಣದಲ್ಲಿ ಓದಿದರೆ ಮೆದುಳು ಸುಲಭವಾಗಿ ಗ್ರಹಿಸಬಲ್ಲದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ದಿನದ ನಿದ್ದೆಯ ಅವಧಿಯನ್ನು ಮೊದಲು ಗೊತ್ತುಪಡಿಸಿಕೊಳ್ಳಿ. ಇನ್ನುಳಿದ ಸಮಯದಲ್ಲಿ ( ಊಟ, ತಿಂಡಿ,ಸ್ನಾನ ಮುಂತಾದ ದೈನಂದಿನ ಕೆಲಸ,ಚಿಕ್ಕ ಸಮಯದ ಆಟ, ಮನರಂಜನೆಯ ಸಮಯವನ್ನು ಕಳೆದು) ಯಾವ ವಿಷಯವನ್ನು ಯಾವ ಅವಧಿಯಲ್ಲಿ ಎಷ್ಟು ಸಮಯ ಓದುತ್ತೇನೆ ಎಂದು ನಿರ್ಧರಿಸಿ ಮನೆಯಲ್ಲಿ ಒಂದು 'ಓದುವ ವೇಳಾಪಟ್ಟಿ'ಯನ್ನು ತಯಾರಿಸಿಟ್ಟುಕೊಳ್ಳಿ. ಭಾನುವಾರ ಮತ್ತು ಇತರೆ ರಜಾದಿನಗಳಲ್ಲೂ ಪರೀಕ್ಷಾ ತಯಾರಿಗಾಗಿಯೇ ವಿಶೇಷ ವೇಳಾಪಟ್ಟಿಯೊಂದು ಇರಲಿ.
"ಶ್ರದ್ಧಾವಾನ್ ಲಭತೇ ಜ್ಞಾನಂ" ಶ್ರದ್ಧೆ ಇರುವವನು ಮಾತ್ರ ಜ್ಞಾನವನ್ನು ಗಳಿಸುತ್ತಾನೆ. ಶ್ರದ್ಧೆಯಿಂದ  ವೇಳಾಪಟ್ಟಿ ಪ್ರಕಾರ ಓದಲು ದೃಢ ಮನಸ್ಸಿನಿಂದ ಆರಂಭಿಸಿ. "ಸಾವಿರ ಮೈಲಿಗಳ ನಮ್ಮ ಪ್ರಯಾಣ ಆರಂಭವಾಗುವುದು ನಾವಿಡುವ ಮೊದಲ ಹೆಜ್ಜೆಯಿಂದ". ಆ ಮೊದಲ ಅಡಿಯನ್ನು ಗಟ್ಟಿಯಾಗಿ ಊರಿದರೆ ಮಾತ್ರ ಮುಂದಿನ ಅಡಿಯನ್ನು ಇಡಲು ಸಾಧ್ಯ ಅಲ್ಲವೇ? ಆರಂಭ ಉತ್ತಮವಾಗಿದ್ದರೆ ಕೈಗೊಂಡ ಕಾರ್ಯವೂ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.
ಆದರೆ ಯಾವುದೇ ಹೊಸ ಅಭ್ಯಾಸ ಅಷ್ಟು ಸುಲಭವಾಗಿ ನಮ್ಮಲ್ಲಿ ನೆಲೆಯಾಗುವುದಿಲ್ಲ. ಅದಕ್ಕಾಗಿ ಯಾವುದೇ ಕಾರಣಕ್ಕೂ ಆರಂಭದಲ್ಲಿ ಒಂದೇ ಒಂದು ದಿನವೂ ವೇಳಾಪಟ್ಟಿಯಂತೆ ಓದುವುದನ್ನು ನಿಲ್ಲಿಸಬೇಡಿ. 'ಬದುಕಲು ಕಲಿಯಿರಿ' ಪುಸ್ತಕದಲ್ಲಿನ ಸ್ವಾಮಿ ಜಗದಾತ್ಮಾನಂದ ಅವರ ಈ ಮಾತುಗಳನ್ನು ನಿಮ್ಮ ಮನದಲ್ಲಿಟ್ಟುಕೊಳ್ಳಿ. "ಹೊಸ ಅಭ್ಯಾಸವು ನಮ್ಮ ಮನಸ್ಸು,ನರವ್ಯೂಹಗಳಲ್ಲಿ  ಆಳವಾಗಿ ಬೇರು ಬಿಡುವವರೆಗೂ ಯೋಜಿಸಿಕೊಂಡ ಸಾಧನೆಯನ್ನು ಒಂದೇ ಒಂದು ದಿನದ ಮಟ್ಟಿಗೂ ಬಿಡಬಾರದು. ಒಂದು ದಿನ ಕಾರಣಾಂತರಗಳಿಂದ ಅಭ್ಯಾಸ ತಪ್ಪಿದರೆ ಮರುದಿನ ಹೇಗಾದರೂ ನಿಯಮಗಳಿಂದ ಜಾರಿಕೊಳ್ಳಲು ಮನಸ್ಸು ಕಾರಣ ಹುಡುಕುತ್ತದೆ"
ಓದುವ ವೇಳಾಪಟ್ಟಿ ತಯಾರಾಗಿ ಜಾರಿಗೆ ಬಂದೇ ಬಿಟ್ಟಿತು... ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಬಿಡಿ. ಓದುವ ಕ್ರಮ ಹೇಗೆ?... ಯಾರದ್ದೋ ಒತ್ತಾಯ,ಒತ್ತಡಕ್ಕಾಗಿ ಓದಬೇಡಿ. ಅದರ ಫಲಿತಾಂಶ ಶೂನ್ಯವಾಗ ಬಹುದು. ಇದರಲ್ಲಿ 'ನನ್ನ ಒಳಿತು ಅಡಗಿದೆ' ಎಂಬುದನ್ನು ಅರಿತು ಓದಿ. ಪರೀಕ್ಷೆಯ ಹಿಂದಿನ ದಿನದ ತಯಾರಿಗಿಂತ ಈ ರೀತಿಯ ಪ್ರತಿದಿನದ ತಯಾರಿ ನಿಮಗೆ ವರವಾಗಿ ಪರಿಣಮಿಸುತ್ತದೆ. ಮೊದಲು ಅರ್ಥೈಸಿಕೊಂಡು ಓದಿ. ಓದಿದ ಮುಖ್ಯಾಂಶಗಳನ್ನು ಸಂಕ್ಷಿಪ್ತವಾಗಿ ಬರೆದಿಟ್ಟುಕೊಳ್ಳಿ.  ನಂತರ ಮನಸ್ಸಿನಲ್ಲೇ ಮನದಟ್ಟು ಮಾಡಿಕೊಳ್ಳಿ. ಆಗಾಗ ಈ ಹಿಂದೆ ಓದಿದ್ದನ್ನೂ ಪುನರಾವರ್ತಿ ಓದುತ್ತಾ ಇರಬೇಕು. ಸರಿಯಾದ ಭಂಗಿಯಲ್ಲಿ ಕುಳಿತು ಓದಿ. ಓದು ಬರೆಹಕ್ಕೆ ಬೇಕಾದ ಎಲ್ಲ ಪರಿಕರಗಳು ಹತ್ತಿರದಲ್ಲೇ ಇರಲಿ. ಸೂಕ್ತ ಗಾಳಿ ಬೆಳಕು ಕೊಠಡಿಯೊಳಗೆ ಬರುವಂತಿರಲಿ. ಒಂದು ವಿಷಯದ ಓದಿನ ನಂತರ ಚಿಕ್ಕ ವಿರಾಮ ನೀಡಿ ಮತ್ತೆ ಆರಂಭಿಸಿ.
ತರಗತಿಯ ಪಾಠಗಳನ್ನು ಆಸಕ್ತಿಯಿಂದ ಆಲಿಸಿ ಮನದಟ್ಟು ಮಾಡಿಕೊಳ್ಳಿ. ಸಂಶಯಗಳಿದ್ದರೆ ಅಲ್ಲೇ ಕೇಳಿ ಪರಿಹರಿಸಿಕೊಳ್ಳಿ. ಕಲಿಕೆಯ,ಜ್ಞಾನ ಗಳಿಕೆಯ ವಿಚಾರದಲ್ಲಿ ಭಯ, ನಾಚಿಕೆ ಸಲ್ಲದು. ಪರೀಕ್ಷಾ ತಯಾರಿಗೆ ಬೇಕಾದ ನೋಟ್ಸ್, ಮಾದರಿ ಪ್ರಶ್ನೆ ಪತ್ರಿಕೆ ಇನ್ನಿತರ ಸಾಮಾಗ್ರಿಗಳು ನಿಮ್ಮಲ್ಲಿರಲಿ. 'ನಿಮ್ಮ ಪ್ರಯತ್ನ ಕ್ಕೆ ಫಲ ಖಂಡಿತ ಸಿಕ್ಕೇ ಸಿಗುತ್ತದೆ'. ಆದ್ದರಿಂದ ಯಾವುದೇ ರೀತಿಯ ಆತಂಕ ಬೇಡ. ನೆಮ್ಮದಿಯಿಂದ ಖುಷಿಖುಷಿಯಾಗಿರಿ. ಯಾರಿಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. 'ಕೀಳರಿಮೆ' ದೂರ ತಳ್ಳಿ 'ಆತ್ಮವಿಶ್ವಾಸ' ಬೆಳೆಸಿಕೊಳ್ಳಿ. ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ. ಊಟ ತಿಂಡಿ ಹಿತಮಿತವಾಗಿ ಸಮಯಕ್ಕೆ ಸರಿಯಾಗಿರಲಿ. ಸಾತ್ವಿಕ ಆಹಾರವನ್ನೇ ಸೇವಿಸುವುದರೊಂದಿಗೆ ಸಾಕಷ್ಟು ನೀರನ್ನು ಕುಡಿಯಿರಿ. ಎಲ್ಲವನ್ನೂ ಚೆನ್ನಾಗಿ ಓದಿ ಕಲಿತಿರುತ್ತೀರಿ, ನಾನು ಓದಿದ್ದೇ ಪರೀಕ್ಷೆ ಗೆ ಬರುತ್ತದೆ ಎಂಬ ದೃಢ ವಿಶ್ವಾಸವಿರಲಿ. ಪರೀಕ್ಷೆಯನ್ನು ಒಂದು 'ಹಬ್ಬ' ಎಂದು ಪರಿಗಣಿಸಿ ಕಲಿತಿದ್ದನ್ನು ಅಂದವಾಗಿ ಬರೆದು ಸಂಭ್ರಮಿಸಿ.

ಈಗ ಹೇಳಿ, ನಿಮ್ಮ ಭವಿಷ್ಯ,ನಿಮ್ಮ ಯಶಸ್ಸು ಯಾರ ಕೈಯಲ್ಲಿದೆ? ನಿಮ್ಮ ಕೈಯಲ್ಲಿ ತಾನೇ? ಮತ್ತೇಕೆ ತಡ? ಮುಂದುವರಿಯಿರಿ..  ಗೆಲುವು ನಿಮ್ಮದೇ.. ಶುಭವಾಗಲಿ

-ರಮೇಶ ಕುಲಾಲ ಎನ್
ನ್ನಡ ಶಿಕ್ಷಕರು,
ಸ‌.ಪ್ರೌಢಶಾಲೆ ಯರ್ಲಪಾಡಿ, ಕಾರ್ಕಳ ಉಡುಪಿ ಜಿಲ್ಲೆ
rameshkulaln@gmail.com


********

🌑ಮನಮುಗಿಲು🌕


ನಮ್ಮ ಮನಗಳಂತೆ ಅದೋ
ಕಪ್ಪು ಕವಿದಿದೆ ಮುಗಿಲಿಗೆ
ಮಬ್ಬು ಹರಿದು ಬೆಳಕು ಸುರಿದು
ರವಿಯು ಬರುವನು ಹಗಲಿಗೆ

ಬರವಸೆ ಎಂಬ ಊರುಗೋಲು
ನಮಗೀಗ ಆಸರೆ
ಇಂದಲ್ಲದೆ ನಾಳೆ
ಒಳ್ಳೆ ಘಳಿಗೆ ನಮ್ಮ ಕೈಸೆರೆ

ನಂಬಿ ನಾವು ಬಾಳಬೇಕು
ಒಳ್ಳೆ ದಿನಗಳ ಅರಸುತ
ನ್ಯಾಯ ನೀತಿಗಳ ನಂಬಿ
ಸತ್ಯ ದಾರಿಯಲ್ಲಿ ನಡೆಯುತ

ಮಬ್ಬು ಹರಿದು ಬಾನ್ಬೆಳಗಬೇಕು
ಇಂದಲ್ಲ ನಾಳೆ ಶಶಿ ಕಿರಣ
ನಾಳೆಗಳಲ್ಲಿ ನಂಬಿಕೆ ಇಟ್ಟು
ಜೋಡುಹೆಜ್ಜೆ ಹಾಕಿ ನಡೆಯೋಣ

ಬಡತನವಿದ್ದರೇನು ಗೆಳತಿ
ಸಾಂಗತ್ಯಕಿಲ್ಲ ಯಾವ ಕೊರತೆ
ಅರಿತು ಬೆರೆತು ಒಂದುಗೂಡಿದ
ಮನೆಯೇನಿಜ ಸಂಪತ್ತಿನೊರತೆ

ನಾನು ನೀನೇ ನೀನು ನಾನೇ
ಏಕವಾಗಿರೆ ಮೈಮನ
ಬೇಕೆಂಬುದೆ ಬೇಡ ಬೇಡ 
ಒಂದೇ ಮನದ ಹೊರತು ಬೇರೇನ

ಉಪ್ಪು ಕಡಲಂತ ಬದುಕು
ಎಲ್ಲ ನದಿಗಳ ಅಪ್ಪುತ
ಸೊಪ್ಪು ಬೇಡ ಸೋಲು ಬೇಡ
ತಿದ್ದಿ ತೀಡಿ ತಪ್ಪುಗಳ ಒಪ್ಪುತ

ಒಳಿತು ಕೆಡಕು ಏನೇ ಇರಲಿ
ನಾನಿರುವೆ ನಿನ್ನ ಜೊತೆ
ಬಾಳ ಹಾದಿಯಲ್ಲಿ 
ಹೆಜ್ಜೆ ಬೆಸೆಯೋಣ ಜೊತೆ ಜೊತೆ

- ಜ್ಯೋತಿ ಬಸವರಾಜ ದೇವಣಗಾವ
  ಯಾದಗಿರಿ
  ಶಹಾಪುರ
  ಗೋಗಿ(ಕೆ)
   9964528373

********

13 ಸೆಪ್ಟೆಂಬರ್ 2019

ಮನದ ಗುಡಿಯೊಳಗಿಹನು....


ಮನದ ಗುಡಿಯೊಳಗಿಹನು ಪರಮಾತ್ಮನು
ದಿನ ನಿತ್ಯ ನಂಬಿ ಅವನ ಪೂಜಿಸು ನೀನು,
ನಿನ್ನ ಇಚ್ಛಾಶಕ್ತಿ ಗುಡಿ ಬೆಳಗೋ ಮಂಗಳ ಜ್ಯೋತಿ,
ಆತ್ಮವಿಶ್ವಾಸವೆ ಅಲಂಕೃತ ಹೂಗಳ ಮಾಲೆ
ನಿನ್ನ ಆಲೋಚನೆ ಪಠಿಸುವ ಮಂತ್ರ ಪ್ರಾರ್ಥನೆ,
ನಿನ್ನೆದೆಯ ಬಡಿತಗಳೇ ಘಂಟೆ ಜಾಗಟೆಯ ಸದ್ದಾಗಿರಲು
ನಿನ್ನಿಂದ ಹೊಮ್ಮುವ ನಿರ್ಧಾರ, ಕಾರ್ಯಗಳೆ ಪಡೆಯುವ ವರಗಳು.

-ದರ್ಶನ್ ಕೆ 
ಚಿಕ್ಕಮರಡಿ,  
ಹೊಸುಡಿ (ಅಂಚೆ),  
ಶಿವಮೊಗ್ಗ (ತಾ, ಜಿ) ೫೭೭೨೨೨