ಪುಟಗಳು

16 ಮಾರ್ಚ್ 2016

೨೪. ಗುಬ್ಬಿಯ ಮಲ್ಲಣಾರ್ಯ

ಗುಬ್ಬಿಯ ಮಲ್ಲಣಾರ್ಯ
 ವೀರಶೈವ ಕವಿಯಾದ
ಈತನ ಕಾಲ: ಕ್ರಿ.ಶ.ಸು.೧೫೧೩
ಈತನ ಕೃತಿಗಳು: 
   ೧) ಭಾವಚಿಂತಾರತ್ನ   (ವಾರ್ಧಕ ಷಟ್ಪದಿ)
   ೨) ವೀರಶೈವಾಮೃತ ಪುರಾಣ (ವಾರ್ಧಕ ಷಟ್ಪದಿ)
   ೩) ಪುರಾತನರ ರಗಳೆ  (ರಗಳೆ)



********

೨೩. ತಿಮ್ಮಣಕವಿ

ತಿಮ್ಮಣಕವಿ
ಈತನ ಕಾಲ: ಕ್ರಿ.ಶ.೧೫೦೦
ಆಶ್ರಯ: ವಿಜಯನಗರದ ಶ್ರೀಕೃಷ್ಣದೇವರಾಯ, ಅರವೀಡು ಸಂತತಿ
ಕೃತಿ: 'ಕೃಷ್ಣರಾಜ(ಯ) ಭಾರತ' (ಕರ್ಣಾಟಕ ಕೃಷ್ಣರಾಯ ಭಾರತ ಕಥಾ ಮಂಜರಿ)
ಬಿರುದು: ‘ಕರ್ಣಾಟಕ ಕವಿಕುಲ ಸಾರ್ವಭೌಮ’

[ಕುಮಾರವ್ಯಾಸನು ಮಹಾಭಾರತದ ೧೦ ಪರ್ವಗಳನ್ನು ಮಾತ್ರ ‘ಕರ್ಣಾಟಭಾರತ ಕಥಾಮಂಜರಿ’ಯಲ್ಲಿ  ಬರೆದಿದ್ದು ಉಳಿದ ೮ ಪರ್ವಗಳನ್ನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ 'ಕೃಷ್ಣರಾಜ ಭಾರತ'ಎಂಬ ಹೆಸರಿನಿಂದ ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ.]

"ಲೇಸೆನಿಸಿದ ಮೊದಲಾ ಕುಮಾರವ್ಯಾಸ ದಶಪರ್ವಗಳ ಹೇಳಿದ, ಭಾರತದ ಉಳಿದ ಪರ್ವಗಳ ನೀ ಸಕಲಜನ ಮೆಚ್ಚುವಂತೆ ಹೇಳು; ಸುರನದಿಯ ಯಮುನಾತರಂಗಿಣಿ ಬೆರೆಸಿ ಹರಿವಂದದಲಿ ಕವಿಕುಂಜರ ಕುಮಾರವ್ಯಾಸನುರುವಾಗ್ಲಹರಿಯೊಡನೀಗ ಸರಿಯೆನಿಸಿ ನೀಕೂಡಿಸೈ.." ಎಂದು ಕೃಷ್ಣದೇವರಾಯನು ಹೇಳಲಾಗಿ ತಾನು ಈ ಕೃತಿಯನ್ನು ಬರೆದುದಾಗಿ ಹೇಳಿದ್ದಾನೆ.

"ವೀರನಾರಾಯಣ ನೀ ಕವಿಯೆನಿಸಿಕೊಂಡೆ, ಕುಮಾರವ್ಯಾಸಗೊಲಿದು ಕನ್ನಡಿಸಿದೆ ಭಾರತವ"  ಎಂದಿದ್ದಾನೆ ತಿಮ್ಮಣ್ಣಕವಿ.

ಕೃತಿಯ ಮೇಲಿನ ಪ್ರಭಾವ:-  ತೆಲುಗಿನಲ್ಲಿ ‘ಕವಿಬ್ರಹ್ಮ’ ಎನಿಸಿದ ತಿಕ್ಕನನ ಮಹಾಭಾರತದ ಪ್ರಭಾವವನ್ನು ‘ಕೃಷ್ಣರಾಜ ಚರಿತೆ’ ಯ ಮೇಲೆ ಉಂಟಾಗಿದೆ.

ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ - ತಿಮ್ಮಣ್ಣಕವಿ.


************** 

೨೨. ಮೂರನೆಯ ಮಂಗರಸ

ಮೂರನೆಯ ಮಂಗರಸ
ಈತನ ಕಾಲ : ಕ್ರಿ.ಶ.ಸು ೧೬ನೆಯ ಶತಮಾನ. (ಸು.೧೫೦೮)
ಚೆಂಗಾಳ್ವ ಅರಸರ ಕಾಲದಲ್ಲಿದ್ದನು. ಈತನ ಸಹೋದರ ಸಂಬಂಧಿ ಎನ್ನಲಾದ ನಂಜುಂಡನು ‘ಕುಮಾರರಾಮನ ಕಥೆ’ಯನ್ನು ಬರೆದಿದ್ದಾನೆ.
         ಮಂಗರಸಕವಿ  ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ‘ಜಯನೃಪಕಾವ್ಯ’, ‘ನೇಮಿಜಿನೇಶ ಸಂಗತಿ’, ‘ಸಮ್ಯಕ್ತ್ವ ಕೌಮುದಿ’ ಮತ್ತು ‘ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.
ಜಯನೃಪಕಾವ್ಯ, ಸೂಪಶಾಸ್ತ್ರಗಳನ್ನು ವಾರ್ಧಕ ಷಟ್ಪದಿಯಲ್ಲಿ ಬರೆದಿದ್ದಾನೆ. ಇವನ ಉಳಿದಗ್ರಂಥಗಳು ಸಾಂಗತ್ಯದಲ್ಲಿವೆ. ಜಯನೃಪಕಾವ್ಯದಲ್ಲಿ ಕಥೆಗಿಂತಲೂ ವರ್ಣನೆ ಹೆಚ್ಚು.
       [ವಿಷವೈದ್ಯಗ್ರಂಥವನ್ನು ಬರೆದ ಒಂದನೆಯ ಮಂಗರಸ (ಸು.೧೩೫೦) ಕವಿ ಮಂಗಾಭಿದಾನವೆಂಬ ನಿಘಂಟನ್ನು ಬರೆದ ಎರಡನೆಯ ಮಂಗರಸ (ಸು.೧೩೯೮)]

ಸುಪಶಾಸ್ತ್ರ ಗ್ರಂಥದಿಂದ ಒಂದು ಚರಣ: ಇದರಲ್ಲಿ ಪಾಕಶಾಸ್ತ್ರವೂ ಸರಸ್ವತಿ ಎಂದು ಸ್ತುತಿಸಲಾಗಿದೆ.

ಪರಬ್ರಹ್ಮಹೃದಯಸರಸಿರುಹೋ
ದರದೊಳಗೊಗೆದಾತನ ಸಿರಿಮೊಗದೊಳು
ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ
ಭರದಿಂ ಭವ್ಯಭುಜಂಗರನವಳೊಳ್
ನೆರಪುವ ಕೋವಿದೆ ನರಸುರವಂದಿತೆ
ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು||


******ಹೆಚ್ಚಿನ ಮಾಹಿತಿ ಕೃಪೆ: ಸಂಪದ, ಪ್ರಜಾವಾಣಿ*******

೨೧.ನಿಜಗುಣ ಶಿವಯೋಗಿ

ನಿಜಗುಣ ಶಿವಯೋಗಿ
 
ಕಾಲ:- ಕ್ರಿ.ಶ.ಸು. ೧೫೦೦

ಸ್ಥಳ:- ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ಸುತ್ತುಮುತ್ತಿನ ಪ್ರದೇಶಕ್ಕೆ ರಾಜರಾಗಿದ್ದರೆಂದು ಊಹಿಸಲಾಗಿದೆ.
ಆರಾಧ್ಯ ದೈವ ಮತ್ತು ಅಂಕಿತ ನಾಮ: ಶಂಭುಲಿಂಗ
ಕೃತಿಗಳು:- 
ಸಪ್ತ ಋಷಿ, ಸಪ್ತಸಾಗರ, ಸಪ್ತಸ್ವರಗಳಂತೆ ನಿಜಗುಣರು ಕನ್ನಡದಲ್ಲಿ ಸಪ್ತ ಅಂದರೆ ಏಳು ಗ್ರಂಥಗಳನ್ನು ರಚಿಸಿದ್ದಾರೆ.
೧. ಕೈವಲ್ಯ ಪದ್ಧತಿ
೨. ಪರಮಾನುಭವ ಬೋಧೆ
೩. ಅನುಭವಸಾರ
೪. ಪರಮಾರ್ಥ ಗೀತೆ
೫. ಪಾರಮಾರ್ಥ ಪ್ರಕಾಶಿಕೆ
೬. ವಿವೇಕ ಚಿಂತಾಮಣಿ
೭. ಅರವತ್ಮೂರು ಪುರಾತನ ತ್ರಿವಿಧಿ

ಮತ್ತಷ್ಟು ಮಾಹಿತಿಗಳು (ಕೃಪೆ:ಕಣಜ)
          ನಿಜಗುಣರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ಸುತ್ತುಮುತ್ತಿನ ಪ್ರದೇಶಕ್ಕೆ ರಾಜರಾಗಿದ್ದರು. ಅವರು ಅಧಿಕಾರದಿಂದ ರಾಜರಾಗಿದ್ದರೂ ಶಿವಭಕ್ತರಾಗಿ, ಜಂಗಮಪ್ರೇಮಿಯಾಗಿ, ಪ್ರಜಾಪ್ರಿಯರೂ ಆಗಿದ್ದರು. ವೇದ, ಉಪನಿಷತ್ತು, ಶಾಸ್ತ್ರ, ಪುರಾಣ, ಇತಿಹಾಸ ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದರು. ನಿಜಗುಣರ ತಂದೆ-ತಾಯಿ ಯಾರು? ಅವರ ಜನಿಸಿದ್ದ ಕಾಲ ಯಾವುದು? ಅವರಿಗೆ ಹೆಂಡತಿ ಮಕ್ಕಳು ಇದ್ದರೆ? ಎನ್ನುವ ಯಾವ ಚಿವಾರವೂ ಖಚಿತವಾಗಿ ತಿಳಿದು ಬಂದಿಲ್ಲ. ಅವರು ಸನ್ಯಾಸ ಸ್ವೀಕಾರ ಮಾಡಿದ ಮೇಲೆ ರಚಿಸಿದ ಗ್ರಂಥಗಳಲ್ಲಿ ತಮ್ಮ ಮೊದಲಿನ ಜೀವನದ ಬಗ್ಗೆ ಯಾವ ವಿಷಯವನ್ನೂ ಹೇಳಿಕೊಂಡಿಲ್ಲ. ಅಲ್ಲಲ್ಲಿ ತಮ್ಮನ್ನು “ನಿಜಗುಣಯೋಗಿ, ನಿಜಗುಣಮತಿ, ಶ್ರೀಮನ್ನಿಜಗುಣ ಶಿವಯೋಗಿ, ಶ್ರೀ ನಿಜಗುಣ ಶಿವಯೋಗೀಂದ್ರ” ಇತ್ಯಾದಿಯಾಗಿ ಕರೆದುಕೊಂಡಿದ್ದಾರೆ. ಆದರೂ ಅವರು ಕನ್ನಡ ಜನಮನದಲ್ಲಿ “ನಿಜಗುಣ ಶಿವಯೋಗಿ” ಎಂದೇ ಹೆಸರಾಗಿದ್ದಾರೆ.
          ಅವರು ತಮ್ಮ “ವಿವೇಕ ಚಿಂತಾಮಣಿ” ಎನ್ನುವ ಗ್ರಂಥದ ದೀಕ್ಷಾ ಪ್ರಕರಣದಲ್ಲಿ ರೇವಣಸಿದ್ಧ, ಮರುಳ ಸಿದ್ಧ, ಏಕೋರಾಮ, ಪಂಡಿತಾರಾಧ್ಯ ಎನ್ನುವ ನಾಲ್ಕು ಜನ ಆಚಾರ್ಯರ ಹೆಸರನ್ನು ಹೇಳಿದ್ದಾರೆ. ೧೨ನೆಯ ಶತಮಾನದ ಮೊದಲಿನಿಂದಲೂ ರೇವಣಸಿದ್ಧರು ಪ್ರಸಿದ್ಧರು. ಮರುಳಸಿದ್ಧ, ಪಂಡಿತಾರಾಧ್ಯರು ಬಸವೇಶ್ವರರ ಕಾಲದಲ್ಲಿಯೇ ಇದ್ದವರು. ಏಕೋರಾಮರು ಬಸವೇಶ್ವರರಿಗಿಂತ ಹಿಂದಿನವರು. ಅಂದ ಮೇಲೆ ನಿಜಗುಣರು ೧೨ನೇಯ ಶತಮಾನದಿಂದ ಈಚೆಗಿನವರು ಇರಬೇಕು. ಹಾಗೆಯೇ ೧೬೫೦ ರಲ್ಲಿ ಷಡಕ್ಷರಿ ಕವಿಯು “ರಾಜಶೇಖರ ವಿಲಾಸ” ಎನ್ನುವ ಕಾವ್ಯದಲ್ಲಿ ನಿಜಗುಣರ ಹೆಸರು ಹೇಳಿರುವುದರಿಂದ ಅವರು ೧೬೫೦ ಕ್ಕಿಂತ ಹಿಂದಿನವರಿರಬೇಕು. ನಿಜಗುಣರ ಗ್ರಂಥಗಳನ್ನು, ಇತರರು ಅವರನ್ನು ಸ್ಮರಿಸಿರುವುದನ್ನು ಅಭ್ಯಾಸ ಮಾಡಿ ವಿದ್ವಾಂಸರು ಅವರ ಕಾಲ ೧೫ನೇ ಶತಮಾನ ಎಂದು ಊಹಿಸಿದ್ದಾರೆ.
 
ಏಳು ದೀಪಗಳು
ನಿಜಗುಣರು ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪಂಡಿತರಾಗಿದ್ದರು. ವೇದ, ಉಪನಿಷತ್ತು, ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸ ಮಾಡಿದ್ದರು. ಈಗ ಗುರುಗಳು ಅಪ್ಪಣೆ ಕೊಡಿಸಿದಂತೆ ಲೋಕಕಲ್ಯಾಣಕ್ಕಾಗಿ ತಾವು ಏನಾದರೂ ಕೆಲಸ ಮಾಡಬೇಕು. ತಮ್ಮ ಯೋಗ ಸಾಧನೆ, ಸಿದ್ಧಿಯ ಸದುಪಯೋಗ ಮಾಡಿಕೊಳ್ಳಬೇಕು. ತಮ್ಮಲ್ಲಿರುವ ಜ್ಞಾನವನ್ನು ನಾಲ್ಕು ಜನರಿಗೆ ಹಂಚಬೇಕು ಎನ್ನುವ ವಿಚಾರದಿಂದ ನಿಜಗುಣರ ಗ್ರಂಥಗಳನ್ನು ಬರೆಯಲು ಪ್ರಾರಂಭಿಸಿದರು.
ಆಗ ಅವರಿಗೆ ಹೊಳೆದ ಮೊದಲನೆಯ ವಿಚಾರವೆಂದರೆ ವೇದ, ಉಪನಿಷತ್ತುಗಳಂತಹ ಅಮೂಲ್ಯ ಗ್ರಂಥಗಳು ಸಂಸ್ಕೃತದಲ್ಲಿಯೇ ಇರುವುವು. ಸಂಸ್ಕೃತದಲ್ಲಿ ಹೆಚ್ಚಿನ ಪಾಂಡಿತ್ಯ ಇರುವವರಿಗೆ ಮಾತ್ರ ವುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಕೇವಲ ಕನ್ನಡ ಭಾಷೆಯನ್ನು ತಿಳಿದ ಸಾಮಾನ್ಯ ಜನರಿಗೆ ಇವು ಕಬ್ಬಿಣದ ಕಡಲೆಯಾಗಿರುವುವು. ಹೀಗೆ ಯೋಚಿಸಿ ಅವರು ನಾಡಿನಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ವೇದ, ಉಪನಿಷತ್ತುಗಳನ್ನು ಸಾರವನ್ನು ಕನ್ನಡದಲ್ಲಿ ಬರೆಯಬೇಕೆಂದು ನಿರ್ಧಾರ ಮಾಡಿದರು.
ನಿನ್ನಿಂದ ಕನ್ನಡ ಜನತೆಗೆ ಬಹಳ ದೊಡ್ಡ ಉಪಕಾರವಾಗಬೇಕಾಗಿದೆ
ಸಪ್ತ ಋಷಿ, ಸಪ್ತಸಾಗರ, ಸಪ್ತಸ್ವರಗಳಂತೆ ನಿಜಗುಣರು ಕನ್ನಡದಲ್ಲಿ ಸಪ್ತ ಅಂದರೆ ಏಳು ಗ್ರಂಥಗಳನ್ನು ರಚಿಸಿದ್ದಾರೆ.
೧. ಕೈವಲ್ಯ ಪದ್ಧತಿ
೨. ಪರಮಾನುಭವ ಬೋಧೆ
೩. ಅನುಭವಸಾರ
೪. ಪರಮಾರ್ಥ ಗೀತೆ
೫. ಪಾರಮಾರ್ಥ ಪ್ರಕಾಶಿಕೆ
೬. ವಿವೇಕ ಚಿಂತಾಮಣಿ
೭. ಅರವತ್ಮೂರು ಪುರಾತನ ತ್ರಿವಿಧಿ
ಇವೇ ಆ ಗ್ರಂಥಗಳು. ಜನಸಾಮಾನ್ಯರನ್ನೂ ವಿದ್ವಾಂಸರನ್ನೂ ಇವು ಆಕರ್ಷಿಸಿವೆ. ಸಾಮಾನ್ಯ ರೈತ, ಹಳ್ಳಿಯ ಗೃಹಿಣಿ, ಬಿಕ್ಷೆ ಬೇಡುವವರು, ಮುಕ್ತಿಮಾರ್ಗ ಬಯಸುವವರು, ಸ್ವಾಮಿಗಳು, ಸಾಧು-ಸಂತರು ಎಲ್ಲರೂ ನಿಜಗುಣರ ಹಾಡುಗಳನ್ನು ಹಾಡುತ್ತಾರೆ. ಹಾಡಿ ಸಂತೋಷ ಪಡುತ್ತಾರೆ. ಈ ಕನ್ನಡ ಗ್ರಂಥಗಳಲ್ಲದೆ “ದರ್ಶನಸಾರಂ” ಮತ್ತು “ಆತ್ಮತರ್ಕ ಚಿಂತಾಮಣಿ” ಎಂಬ ಎರಡು ಸಂಸ್ಕೃತ ಗ್ರಂಥಗಳನ್ನೂ ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ಆ ಗ್ರಂಥಗಳ ಪ್ರತಿಗಳು ಇರುವರೆಗೂ ಸಿಕ್ಕಿಲ್ಲ.

೧. ಕೈವಲ್ಯ ಪದ್ಧತಿ:-
      ಹುಟ್ಟಿನಿಂದಲೇ ನಿಜಗುಣರು ಕವಿಹೃದಯವುಳ್ಳವರಾಗಿದ್ದರು. ಯೋಗಸಾಧನೆ ಮಾಡುತ್ತಿದ್ದಾಗಲೇ ಅವರು ತಮ್ಮ ಅನುಭವಗಳನ್ನು ಕವಿತೆಗಳ ರೂಪದಲ್ಲಿ ಹಾಡಿಕೊಳ್ಳುತ್ತಿದ್ದರು. ಅವರಿಗೆ ಸಂಗೀತದಲ್ಲಿಯೂ ಹೆಚ್ಚಿನ ಪಾಂಡಿತ್ಯವಿತ್ತು. ಆಧ್ಯಾತ್ಮದಂತಹ ಕಠಿಣವಿಷಯದ ಬಗ್ಗೆ ಸರಳವಾದ, ಸುಂದರವಾದ, ಕನ್ನಡದಲ್ಲಿ ಕವನಗಳನ್ನು ರಚಿಸಿದರು. ಅವುಗಳಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತಕ್ಕೆ ಹೊಂದುವಂತೆ ರಾಗ, ತಾಳಗಳನ್ನು ಹಾಕಿದರು. ಎಲ್ಲರಿಗೂ ತಿಳಿಯುವಂತೆ ಸರಳ ಕನ್ನಡದಲ್ಲಿ ರಾಗಬದ್ಧವಾಗಿ ಬರೆದಿದ್ದರಿಂದ ಅವರ ಕವಿತೆಗಳು ಬಹು ಜನಪ್ರಿಯವಾದವು.
“ಕೈವಲ್ಯ” ಎಂದರೆ ಮುಕ್ತಿ, “ಪದ್ಧತಿ” ಎಂದರೆ ಮಾರ್ಗ ಎಂದು ಅರ್ಥವಾಗುತ್ತದೆ. ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿದ್ದಾರೆ. ಪರಮೇಶ್ವರನ, ಗುರುವಿನ ಸ್ತುತಿಯಿಂದ ಈ ಗ್ರಂಥ ಪ್ರಾರಂಭವಾಗುತ್ತದೆ. ತಾಯಿ ಮಗುವನ್ನು ಮರಿ, ಪಾಪು, ಬಾಳಾ, ತಮ್ಮಾ ಎಂದು ಮೊದಲಾಗಿ ಬೇರೆ ಬೇರೆ ಹೆಸರಿನಿಂದ ಕರೆದು ಸಂತೋಷಪಡುತ್ತಾಳೆ. ಅದರಂತೆ ಇಲ್ಲಿ ನಿಜಗುಣರು ಶಿವಾ, ಮಹಾದೇವ, ಶಂಕರ, ಪಾರ್ವತೀಧವ, ನೀಲಕಂಠ, ನಾಗಭೂಷಣ, ಚಂದ್ರಮೌಳಿ, ಫಾಲಾಕ್ಷ, ಪಶುಪತಿ ಮುಂತಾದ ನೂರಎಂಟು ನಾಮಾವಳಿಗಳಿಂದ ಪರಮೇಶ್ವರನನ್ನು ಸ್ತುತಿಸಿದ್ದಾರೆ. “ಉದಯ ಅಸ್ತಮಾನದೊಳು ನೂರೆಂಟು ನಾಮವನ್ನು ಪದುಳದಿಂದ ಓದಿ ಕೇಳಿದವರ್ಗೆ ಶಂಭುಲಿಂಗದ ಕರುಣದಿಂದ ಇತಿತು ಕೊರತೆಯಿಲ್ಲದೆ ಸಕಲ ಸಂಪದಗಳು ಒಂದುಗೂಡಿ ಸದಮಲ ಜ್ಞಾನ ಸದ್ಭಕ್ತಿಗಳು ಮೇಲೊದಗಿ ಕೈಸಾರುತಿಹವು ಇಹದಲ್ಲಿ ಪರದೊಳೊಂದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆತುದಿದು ಸತ್ಯ.” ಎಂದು ಈ ಸ್ತೂತ್ರ ಮುಕ್ತಾಯವಾಗುತ್ತದೆ. ಅಂದರೆ ಈ ರೀತಿಯಾಗಿ ದಿನವೂ ಬೆಳಗ್ಗೆ, ಸಂಜೆ ಈಶ್ವರನನ್ನು ಸ್ಮರಿಸಬೇಕು. ಅವರಿಗೆ ಸಕಲ ಸಂಪತ್ತುಗಳು ಸಿಕ್ಕುತ್ತವೆ. ಜ್ಞಾನ, ಭಕ್ತಿಗಳು ದೊರೆತು ಮುಕ್ತಿಯು ದೊರೆಯುತ್ತದೆ ಎಂದು ಹೇಳಿದ್ದಾರೆ. ಅದರಂತೆ ಹ್ರೀಂಕಾರಿ, ವಾಣಿ, ಕಲ್ಯಾಣಿ, ರುದ್ರಾಣಿ, ರಮೆ, ವಿಮಲೆ, ಗಿರಿಜೆ, ಸುಮತಿ, ಸುಲಲಿತೆ, ಮಹೇಶ್ವರಿ, ಮಧುಮಾತೆ ಎನ್ನುವ ಸುಂದರ ಹೆಸರುಗಳಿಂದ ಪಾರ್ವತಿಯನ್ನು ಹಾಡಿ ಹೊಗಳಿದ್ದಾರೆ.
ಈ ಕೃತಿಯಲ್ಲಿರುವ ಪ್ರಮುಖ ವಚನಗಳು

ಎಲ್ಲ ಧರ್ಮಗಳ ಸಾರ
ಯಾವ ಕಾಲಕ್ಕೂ ಎಲ್ಲರಿಗಿಂತಲೂ ಗುರುವು ದೊಡ್ಡವನು. ಅವನ ಉಪದೇಶವನ್ನು ಆಲಿಸಬೇಕು. ಅದರಂತೆ ಆಚರಿಸಿದರೆ ಮಾನವನಿಗೆ ಮುಕ್ತಿ ದೊರೆಯುತ್ತದೆ.

ಶ್ರೀಗುರು ವಚನೋಪದೇಶವನಾಲಿಸಿ
ದಾಗಳಹುದು ನರರಿಗೆ ಮುಕುತಿ
ದುರಿತ ಕರ್ಮವನೊಲ್ಲದಿರು, ಪುಣ್ಯವನೆ ಮಾಡು
ಹರನಡಿವಿಡಿ, ಶಾಂತರೊಡನಾಡು
ಕರುಣವಿರಲಿ ಜೀವರೊಳು ನೀತಿ ವಿದನಾಗು
ಪೊರೆ ಪೊರ್ದಿದರನೆಂದು ಬೆಸಸುವ
ನಿಂದಿಸಿ ನುಡಿಯದಿರಾರನು, ಮನಸಿಗೆ
ಬಂದಂತೆ ನಡೆಯದಿರಿಹದಲ್ಲಿ
ಕುಂದುವಡೆಯದಿರು ಕಾಮಾದಿಗಳನು ಜಯಿ
ಸೆಂದು ಕೈವಿಡಿದನುಗ್ರಹಿಸುವ
ಭವಮಾಲೆಗಲಸು, ಪುಸಿಯದಿರೆಡರು ಬಂದು
ಕವಿಯಲಂಜದಿರು, ಸಂಪದದೊಳು
ತವೆಮದವಳಿದಿರು ತತ್ವಸಂತತಿಯನು
ವಿವರಿಸಿ ನೊಡೆಂದು ತಿಳುಪುವ
ಳಸದಿರದ್ವೈತವನು ಬಾಹ್ಯದಲಿ,
ನಿನ್ನೊಳಗೇಕೋ ಭಾವನೆಯೊಡಗೂಡು
ತಿಳಿದು ಸಮಯ ನಿಷ್ಠೆಗಳಿ ವೇದವಿಧ ಭಕ್ತಿ
ಗಳನಗಲದಿರೆಂದುಸುರುವ
ಆರುನಾನೆಂದು ವಿಚಾರಿಸುವ, ವಿಷಯ
ಸಂಸಾರವಿದನು ಕನಸೆಂದರಿ
ಮಾರಮರ್ದನ ಶಂಭುಲಿಂಗವನೊಲಿಸಿ
ಗಂಭೀರ ಸುಖದೊಳಿರೆಂದರುಪುವ

ಕೆಟ್ಟ ಕೆಲಸವನ್ನು ಮಾಡಬೇಡ. ಪುಣ್ಯವನ್ನೇ ಮಾಡು.
ಒಳ್ಳೆಯವರೊಡನೆ ಇರು. ನೀತಿ ಮಾರ್ಗದಲ್ಲಿ ನಡೆ. ಈಶ್ವರನಿಗೆ ಶರಣುಹೋಗು. ಉಳಿದ ಜೀವಿಗಳಲ್ಲಿ ದಯೆ ತೋರು. ಕಷ್ಟಗಳು ಬಂದಾಗ ಅಂಜಬೇಡ. ಶ್ರೀಮಂತಿಕೆ ಬಂದಾಗ ಸೊಕ್ಕು ತೋರಿಸಬೇಡ. ಒಳಗೊಂದುಸ ಹೊರಗೊಂದು ಮಾತನಾಡಬೇಕು. ಒಂದೇ ರೀತಿಯಾಗಿರು. ಸಮಯನಿಷ್ಠೆ ಅಂದರೆಮತ, ಧರ್ಮಗಳಲ್ಲಿ ನಿಷ್ಥೆಯಿಂದ ಇರುವುದನ್ನು ಕಲಿ. ಇಲ್ಲಿ ಹುಟ್ಟಿ ಬಂದ “ನಾನು” ಯಾರು? ನನ್ನ ಕರ್ತವ್ಯವೇನು? ಎನ್ನುವ ಬಗ್ಗೆ ವಿಚಾರ ಮಾಡು. ಈ ರೀತಿಯಾಗಿ ನಡೆದುಕೊಂಡು ಶಂಭುಲಿಂಗನನ್ನು ಒಲಿಸಿಕೊಂಡು, ಸುಖವಾಗಿರು ಎನ್ನುತ್ತಾರೆ ನಿಜಗುಣ ಶಿವಯೋಗಿಗಳು. ಅದು ಅಂಥಿಂಥ ಸುಖವಲ್ಲ. ಗಂಭೀರ ಸುಖ. ಈ ಒಂದು ಪದ್ಯದಲ್ಲಿರುವಂತೆ ನಡೆದರೆ ಸಾಕು, ಮನುಷ್ಯನ ಜೀವನವೇ ಸಾರ್ಥಕವಾಗುತ್ತದೆ. ಎಲ್ಲ ಧರ್ಮಗಳ ಸಾರವೂ ಇದರಲ್ಲಿದೆ.

ನೋಡಲಾಗದೆ
ಶಿವನು ತಮ್ಮನ್ನು ಕರುಣೆ ತೋರಿ ನೋಡಬೇಕು.ತಮ್ಮ ಮನಸ್ಸಿನಲ್ಲಿದ್ದ ಕತ್ತಲೆಯನ್ನು ಕಳೆಯಬೇಕು ಎಂದು ನಿಜಗುಣರು ಅಂಗಲಾಚಿ ಬೇಡಿಕೊಂಡಿದ್ದಾರೆ.

ನೋಡಲಾಗದೆ ದೇವ ನೋಡಲಾಗದೆ 
ಕೂಡೆ ನಿನ್ನ ದಿಟೆ ಮೂರು 
ನಾಡೆ ಲೇಸು ಮಾಡಲೆನ್ನ........

ಶಿವನು ತನ್ನ ಮೂರು ಕಣ್ಣುಗಳನ್ನು ತೆರೆದು ತಮ್ಮನ್ನು ನೋಡಬೇಕು. ಮೂರು ಕಣ್ಣುಗಳಲ್ಲಿ ಒಂದನ್ನು ಅಗ್ನಿಗೆ, ಇನ್ನೊಂದನ್ನು ಸೂರ್ಯನಿಗೆ ಮತ್ತೊಂದನ್ನು ಚಂದ್ರನಿಗೆ ಹೋಲಿಸಿದ್ದಾರೆ. ಅಗ್ನಿಯಿಂದ ಮನದಲ್ಲಿದ್ದ ಮೋಹವೆಂಬ ಕಾಡನ್ನು ಸುಡಬೇಕು. ಹೃದಯ ಕಮಲವನ್ನು ಅರಳಿಸಲು ಸೂರ್ಯನು ಕಣ್ಣುಬಿಚ್ಚಿ ನೋಡಬೇಕು. ಹೃದಯ ಸಮುದ್ರ ಉಕ್ಕೇರಿ ಬರಲು ಚಂದ್ರನ ಕಣ್ಣಿನಿಂದ ತಂಪಾದ ಕಿರಣಗಳನ್ನು ಸುರಿಸಬೇಕು ಎಂದು ಬೇಡಿಕೊಳ್ಳುವ ಈ ಹಾಡು ಬಹಳ ಸುಂದರವಾಗಿದೆ.

ಕೋಗಿಲೆ ಚೆಲ್ವೆ ಕೋಗಿಲೆ
ಇದರಂತೆಯೇ ಮನಸ್ಸನ್ನು ಕೋಗಿಲೆಗೆ ಹೋಲಿಸಿ ಅದಕ್ಕೆ ಬುದ್ಧಿ ಮಾತು ಹೇಳಿದ್ದಾರೆ. ಇನ್ನೊಂದು ಕವಿತೆಯಲ್ಲಿ ಅದೂ ಕೂಡ ಕೋಗಿಲೆಯ ಧ್ವನಿಯಂತೆಯೇ ಮಧುರವಾಗಿದೆ.

ಕೋಗಿಲೆ ಚೆಲ್ವ ಕೋಗಿಲೆ 
ಮುದ್ದು ಕೋಗಿಲೆ ಜಾಣ ಕೋಗಿಲೆ
ಹಿಂದೆ ತಪದೋಳೀಶನೊಂದಿರುತಿರಲೆಚ್ಚು
ಬೆಂದಕಾಮನ ಬಿಟ್ಟು ಕೋಗಿಲೆ
ಬಂದು ಬೇಗದಿ ಬಾಲೇಂದುಧರದ ಕೊಡಿ
ಕುಂದದೇ ನೀ ಬಾಳು ಕೋಗಿಲೆ
ದುರುಳ ಕಂತುವಿನೊಡನಿರೆ ಲೋಕದೊಳು ನಿನ್ನ
ಪರಪುಟ್ಟನೆಂಬರು ಕೋಗಿಲೆ
ಧರೆಗೆ ಜನಕನಾದ ಗುರುಶಂಭುಲಿಂಗದ
ಚರಣ ಪಲ್ಲವ ಪಿಡಿ ಕೋಗಿಲೆ


“ಶಿವನ ತಪಸ್ಸನ್ನು ಕೆಡಿಸಲು ಹೋಗಿ ಅವನಿಂದ ಸುಟ್ಟು ಬೂದಿಯಾದ, ಋಷಿ-ಮಿನಿಗಳ ನೀತಿಗೆಡಿಸುವ, ವಿರಹಿಗಳ ಮನಸ್ಸನ್ನು ಕೊರೆಯುವ, ಕಾಮನನ್ನು ಬಿಟ್ಟು ಎಲ್ಲ ಜೀವಿಗಳನ್ನೂ ಪ್ರೀತಿಯಿಂದ ನೋಡುವ ಶಿವನನ್ನು ಕೊಡಿ ಕುಂದದಂತೆ ಬಾಳು. ಕಾಮನನ್ನು ಬಣ್ಣಿಸಿದರೆ ನಿನಗೇ ಕೇಡಲ್ಲವೇ? ಆದ್ದರಿಂದ ಪಾರ್ವತೀಪತಿಯನ್ನು ಕುರಿತು ಹಾಡು. ದುಷ್ಟನಾದ ಕಾಮನೊಡನಿದ್ದರೆ ಲೋಕದ ಜನರು ನಿನ್ನನ್ನು ಪರಪುಟ್ಟ (ಬೇರೆಯವರಿಂದ ಜೀವಿಸುವನು) ಎಂದು ಹೀಯಾಳಿಸುತ್ತಾರೆ. ಆದ್ದರಿಂದ ಅವನ ಸಂಗವನ್ನು ತೊರೆದು, ಮುದ್ದು ಕೋಗಿಲೆಯ, ಲೋಕದ ಒಡೆಯನಾದ ಗುರುಶಂಭುಲಿಂಗದ ಪಾದಗಳನ್ನು ಹಿಡಿದುಕೋ” ಎಂದು ಮನಸ್ಸಿಗೆ ಶಿವಕಾರುಣ್ಯವನ್ನು ಪಡೆಯಲು ಬೋಧಿಸಿದ್ದಾರೆ.

ದೇವರನ್ನು ತಾವು ಏನನ್ನು ಬೇಡುತ್ತೇವೆ ಎನ್ನುವುದನ್ನು ನಿಜಗುಣರು ಇನ್ನೊಂದು ಪದ್ಯದಲ್ಲಿ ಬಹಳ ಸರಳವಾಗಿ ಹೇಳಿದ್ದಾರೆ. ಸಾಮಾನ್ಯ ಮಾನವರು ಮನೆಯ್ನನೂ ಆಸ್ತಿಯನ್ನೂ, ಸಕಲಸಂಪತ್ತನ್ನೂ, ದೀರ್ಘಾಯುಷ್ಯವನ್ನೂ ಬೇಡುತ್ತಾರೆ. ಆದರೆ ಈ ಶಿವಯೋಗಿಗಳು ಏನನ್ನು ಬೇಡುತ್ತಾರೆ ನೋಡಿ:

ಬೇಡುವೆನಭವ ನಿಮ್ಮನು ಭವಭವದೊಳು
ಮಾಡೆನಗೊಲಿದು ಸುಗುಣ ಸಂತತಿಯನಿಂತು


ಎಂದು ಪದ್ಯವನ್ನು ಪ್ರಾರಂಭ ಮಾಡುತ್ತಾರೆ. ಕಷ್ಟ ಬಂದಾಗ ಧೈರ್ಯವನ್ನು ಕೊಡು. ಶ್ರೀಮಂತಿಕೆ ಇದ್ದಾಗಲೂ ವಿನಯವನ್ನು ಕೊಡು. ಯೌವನವಿದ್ದಾಗ ಕೆಟ್ಟ ದಾರಿ ಹಿಡಿಯದಂಥ ಗಟ್ಟಿಯಾದ ಮನಸ್ಸನ್ನು ಕೊಡು. ಹಿಡಿದ ಕೆಲಸವನ್ನು ಬಿಡದೆ ಮಾಡುವ ಛಲವನ್ನು ಕೊಡು. ಪ್ರಾಣಹೋದರು ಇತರರಿಗೆ ಶರಣಾಗದ ಮನವನ್ನು ಕೊಡು. ಪರಸ್ತ್ರೀಯನ್ನು ತಾಯಿಯಂತೆ ಕಾಣುವ ವಿವೇಕವನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ.
 
೨. ಪರಮಾನುಭವ ಬೋಧೆ :-
ಉಪನಿಷತ್ತುಗಳಲ್ಲಿ ಬೃಹದಾರಾಣ್ಯಕೋಪನಿಷತ್ತು ಒಂದು. ಅದರ ಎರಡನೆಯ ಅಧ್ಯಾಯದಲ್ಲಿ ಒಂದು ಕಥೆ ಬರುತ್ತದೆ. ಯಾಜ್ಞವಲ್ಕ್ಯರು ಒಬ್ಬ ಮಹಾಋಷಿಗಳು. ಅವರಿಗೆ ಒಬ್ಬರು ಹೆಂಡತಿಯರು. ದೊಡ್ಡವಳ ಹೆಸರು ಕಾತ್ಯಾಯಿನಿ. ಚಿಕ್ಕವಳ ಹೆಸರು ಮೈತ್ರೇಯಿ. ಯಾಜ್ಞವಲ್ಕ್ಯರಿಗೆ ಸಂಸಾರ ಬಿಟ್ಟು ಸನ್ಯಾಸ ತೆಗೆದುಕೊಳ್ಳಬೇಕೆನ್ನುವ ಬಯಕೆಯಾಗುತ್ತದೆ. ಆಗ ಅವರು ಇಬ್ಬರು ಹೆಂಡತಿಯರನ್ನು ಕರೆದು ತಾವು ಅಲ್ಲಿಯವರೆಗೆ ರಾಜ-ಮಹಾರಾಜರುಗಳಿಂದ ಸ್ವೀಕರಿಸಿದ ಸಂಪತ್ತನ್ನು ಎರಡು ಭಾಗ ಮಾಡಿ ಹಂಚಿ ಕೊಡುತ್ತಾರೆ. “ನೀವಿಬ್ಬರೂ ಸುಖವಾಗಿರಿ. ನಾನು ತಪಸ್ಸಿಗೆ ಹೋಗುತ್ತೇನೆ” ಎನ್ನುತ್ತಾರೆ. ಕಾತ್ಯಾಯಿನಿ ಸುಮ್ಮನೆ ಒಪ್ಪಿಕೊಳ್ಳುತ್ತಾಳೆ. ಆದರೆ ಮೈತ್ರೇಯಿಗೆ ಸಮಾಧಾನವಾಗುವುದಿಲ್ಲ. ಆಗ ಅವಳು ಪತಿ ದೇವರಿಗೆ “ಈ ಲೌಕಿಕ ಸಂಪತ್ತಿನಿಂದ ಶಾಶ್ವತವಾಗಿ ಸುಖ ಸಿಕ್ಕುವುದೇ?” ಎಂದು ಪ್ರಶ್ನೆ ಮಾಡುತ್ತಾಳೆ. ಅವರು ಇಲ್ಲವೆನ್ನುತ್ತಾರೆ. ಅದಕ್ಕೆ ಮೈತ್ರೇಯಿ, “ಹಾಗಾದರೆ ನನಗೆ ಧನದಿಂದ ಸಿಕ್ಕುವ ಅಶಾಶ್ವತ ಸುಖ ಬೇಡ, ಅಚ್ಚಳಿಯದ ಸುಖ ಬೇಕು. ಆ ಹಾದಿಯನ್ನು ತೋರಿಸಿರಿ” ಎನ್ನುತ್ತಾಳೆ. ಆಗ ಯಜ್ಞವಲ್ಕ್ಯರು ಅವಳ ಈ ಇಚ್ಛೆಗೆ ಮೆಚ್ಚಿ ಅದ್ವೈತ ವೆಂದರೇನು? ಪರಬ್ರಹ್ಮ ವಸ್ತುವೆಂದರೇನು? ಎನ್ನುವುದನ್ನು ಅವಳಿಗೆ ಬೋಧಿಸುತ್ತಾರೆ. ಅದನ್ನು ಕೇಳಿ ಮೈತ್ರೇಯಿ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳುವಳು. ಮೂಲದಲ್ಲಿ ಈ ಗ್ರಂಥವು ಸಂಸ್ಕೃತದಲ್ಲಿ ಇರುವುದರಿಂದ ನಿಜಗುಣರು ಜನಸಾಮಾನ್ಯರಿಗಾಗಿ ಇದನ್ನು ಕನ್ನಡಿಸಿರುವರು. ಅದಕ್ಕೆ “ಪರಮಾನುಭವ ಬೋಧೆ” ಎಂದು ಹೆಸರಿಟ್ಟಿರುವರು. ಪರಮ ಎಂದರೆ ಎಲ್ಲಕ್ಕೂ ಹೆಚ್ಚಿನದು, ದೊಡ್ಡದು. ಅದರ ಅನುಭವದಿಂದಲೇ ನಿಜವಾದ ಸುಖವು ಸಿಕ್ಕುವುದು. ಅದನ್ನು ಬೋಧಿಸುವುದೇ ಈ ಪುಸ್ತಕದ ತಿರುಳು.

೩. ಅನುಭವಸಾರ :-
         ಮುಕ್ತಿ ಕೋಪನಿಷತ್ತಿನ ಸಾರವನ್ನು ತಮ್ಮ “ಅನುಭವಸಾರ” ಎನ್ನುವ ಗ್ರಂಥದಲ್ಲಿ ನಿಜಗುಣರು ನಿರೂಪಿಸಿದ್ದಾರೆ. ವೇದಗಳ ಕೊನೆಯ ಭಾಗ ಉಪನಿಷತ್ತು. ಋಷಿಗಳು ಆಧ್ಯಾತ್ಮ ವಿದ್ಯೆಯನ್ನು ಉಪನಿಷತ್ತುಗಳಲ್ಲಿಯೇ ಬೋಧಿಸಿದ್ದಾರೆ. ಭಾರತೀಯರ ತತ್ವಜ್ಞಾನವು ಉಪನಿಷತ್ತಿನಿಂದಲೇ ಪ್ರಾರಂಭವಾಗುತ್ತದೆ. ಅಂಥ ತತ್ವಜ್ಞಾನದ ಅನುವಾದವನ್ನು, ಸಾರವನ್ನು ಪ್ರಥಮವಾಗಿ ಕನ್ನಡದಲ್ಲಿ ಇಳಿಸಿಕೊಟ್ಟು ನಿಜಗುಣ ಶಿವಯೋಗಿಗಳು ಕನ್ನಡಿಗರಿಗೆ ಬಹಳ ದೊಡ್ಡ ಉಪಕಾರವನ್ನು ಮಾಡಿದ್ದಾರೆ.

೪. ಪರಮಾರ್ಥಗೀತೆ :-
     ಪ್ರಸಿದ್ಧವಾದ “ಯೋಗವಾಸಿಷ್ಠ” ಎನ್ನುವ ಸಂಸ್ಕೃತ ಗ್ರಂಥದಲ್ಲಿ ಹೇಳಿದ ಆಧ್ಯಾತ್ಮದ ವಿಷಯವನ್ನೇ ತಮ್ಮ “ಪರಮಾರ್ಥಗೀತೆ” ಎನ್ನುವ ಪುಸ್ತಕದಲ್ಲಿ ಬರೆದಿದ್ದಾರೆ. ತಾನು ಯಾರು? ತನ್ನ ನಿಜವಾದ ರೂಪ ಯಾವುದು? ಈ ಸೃಷ್ಟಿ ಹೇಗೆ ಪ್ರಾರಂಭವಾಯಿತು? ಅದರ ಬಂಧನದಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವಾಗ? ಮುಂತಾದ ಶಿಷ್ಯನ ಪ್ರಶ್ನೆಗಳಿಗೆ ಗುರುವು ಸರಿಯಾದ ಉತ್ತರವನ್ನು ಕೊಟ್ಟು ಅವನ ಸಂಶವನ್ನು ಪರಿಹಾರ ಮಾಡುತ್ತಾನೆ.

. ಪಾರಮಾರ್ಥ ಪ್ರಕಾಶಿಕೆ :-
      ಚೆನ್ನಸದಾಶಿವಯೋಗಿಗಳು ಸಂಸ್ಕೃತದಲ್ಲಿ “ಶಿವಯೋಗ ಪ್ರದೀಪಿಕಾ” ಎನ್ನುವ ಗ್ರಂಥವನ್ನು ರಚಿಸಿದ್ದರು. ಇವರು ನಿಜಗುಣರ ಗುರುಗಳು ಇದ್ದಿರಬಹುದುದೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ. ಇದನ್ನು ನಿಜಗುಣರು ತಮ್ಮ ಗ್ರಂಥದಲ್ಲಿ ಖಚಿತ ಪಡಿಸಿಲ್ಲ. ಈ “ಶಿವಯೋಗ ಪ್ರದೀಪಿಕಾ” ವು ಯೋಗಶಾಸ್ತ್ರವನ್ನು ತಿಳಿಸುವ ಗ್ರಂಥ. ಇದು ನಿಜಗುಣರಿಗೆ ಬಹಳ ಉಪಯುಕ್ತವಾಗಿ ಕಂಡಿರಬೇಕು. ಆದ್ದರಿಂದ ಇದರ ಲಾಭವನ್ನು ಇತರರು ಪಡೆಯಬೇಕೆಂದು ನಿಜಗುಣರು ಇದನ್ನು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಈ ಗ್ರಂಥಕ್ಕೆ “ಪಾರಮಾರ್ಥ ಪ್ರಕಾಶಿಕೆ” ಎಂದು ಕರೆದಿದ್ದಾರೆ. ಇದು ಭಾಷಾಂತರವಾಗಿದ್ದರೂ ನಿಜಗುಣರ ಪಾಂಡಿತ್ಯ ಮತ್ತು ಅನುಭಾವಗಳಿಂದ ಸ್ವತಂತ್ರ ಗ್ರಂಥದಂತೆಯೇ ಅನ್ನಿಸುತ್ತದೆ.

೬. ವಿವೇಕ ಚಿಂತಾಮಣಿ :-
       ನಿಜಗುಣರ ವಿಚಾರಗಳು ಸುಂದರವಾಗಿರುವಂತೆ ನಿತ್ಯನೂತನವಾಗಿಯೂ ಇವೆ. ಅವರು ಪಂಡಿತರನ್ನು ತಲೆದೂಗಿಸುತ್ತಾರೆ. ಹಾಗೆಯೇ ಪಾಮರರನ್ನು ಅಂದರೆ ಕಲಿಯದವರನ್ನು ಸಮಾಧಾನಪಡಿಸುತ್ತಾರೆ. ನಿಜಗುಣರ ಗದ್ಯ ಗ್ರಂಥವಾದ “ವಿವೇಕ ಚಿಂತಾಮಣಿ” ಎನ್ನುವ ಮಹಾಗ್ರಂಥವು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲನೆಯ ವಿಶ್ವಕೋಶವೆಂದು ಹೇಳುತ್ತಾರೆ. (ವಿಶ್ವಕೋಶ ಎಂದರೆ ಎಲ್ಲ ವಿಷಯಗಳ ಬಗ್ಗೆ ತಿಳುವಳಿಕೆ ಕೊಡುವ ಗ್ರಂಥ. ಯಾವ ವಸ್ತುವನ್ನು ಕುರಿತು ನಾವು ತಿಳಿಯಬೇಕೆಂದು ಬಯಸಿದರೂ ಅದರ ವಿಷಯವನ್ನು ಹೇಳುವ ಗ್ರಂಥ.) ಅದರ‍ಲ್ಲಿ ವಿಶ್ವದಲ್ಲಿರುವ ಎಲ್ಲ ವಿಷಯಗಳ ಬಗ್ಗೆಯೂ ಪರಿಚಯವಿದೆ.  ಸ್ಮೃತಿ, ಪುರಾಣ, ಇತಿಹಾಸ, ಪುರಾತನರ ಹೇಳಿಕೆಗಳಿಂದ ಆರಿಸಿ ತೆಗೆದು, ಕೇವಲ ಕಲ್ಪನೆ ಮಾಡದೆ, ಅನುಭವಿಗಳು ಅಹುದೆನ್ನುವಂತೆ, ಎಲ್ಲದರ ತಿರುಳನ್ನು ಕೂಡಿಸಿ, ಸತ್ಯವಾದುದನ್ನು ಸಂಗ್ರಹಿಸಿ, ಅಲ್ಲಲ್ಲಿ ಚೆದುರಿಹೋದ ಬೆಲೆಯುಳ್ಳ ರತ್ನಗಳನ್ನು ಕೂಡಿಸಿ, ಸುಂದರವಾದ ಸರವನ್ನು ಪೋಣಿಸುವಂತೆ, ಜ್ಞಾನಾಪೇಕ್ಷಿಗಳಿಗೆ ಬೆಳುಗನ್ನಡದಲ್ಲಿ ವಿವೇಕ ಚಿಂತಾಮಣಿ ಎನ್ನುವ ಗ್ರಂಥದಲ್ಲಿ ರಚಿಸಿದ್ದೇನೆ ಎಂದು ಅದರಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚಿನ ಜ್ಞಾನವನ್ನು ಪಡೆಯಬಯಸುವ ಎಲ್ಲರಿಗೂ ಈ ಗ್ರಂಥವು ಕೇಳಿದ್ದನ್ನು ಕೊಡುವ ಚಿಂತಾಮಣಿಯಾಗಿದೆ. ಈ ವಿವೇಕ ಚಿಂತಾಮಣಿಯನ್ನು ಕೊಡಗಿನ ಲಿಂಗರಾಜರು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ. ಆ ಗ್ರಂಥದ ಆಧಾರದ ಮೇಲೆ ಶಾಂತಲಿಂಗ ದೇಶಿಕ ಎನ್ನುವವರು ಮರಾಠಿ ಭಾಷೆಯಲ್ಲಿಯೂ ಬರೆದಿದ್ದಾರೆ. ಅಲ್ಲದೆ ಇತರರು ತಮಿಳು, ತೆಲುಗು, ಭಾಷೆಗಳಲ್ಲಿಯೂ ಈ ಗ್ರಂಥವನ್ನು ಅನುವಾದಿಸಿದ್ದಾರೆ. ಇದರಿಂದ “ವಿವೇಕ ಚಿಂತಾಮಣಿ”ಯು ಆ ಕಾಲದಲ್ಲಿಯೇ ಎಷ್ಟೊಂದು ಜನಪ್ರಿಯವಾಗಿತ್ತು ಎನ್ನುವುದು ತಿಳಿದು ಬರುತ್ತದೆ; ಅಲ್ಲದೆ ದಕ್ಷಿಣ ಭಾರತದಲ್ಲೆಲ್ಲಾ ತುಂಬ ಪ್ರಸಿದ್ಧವಾಗಿದ್ದುದು ಕಂಡುಬರುತ್ತದೆ.

೭. ಅರವನ್ಮೂರು ಪುರಾತನರ ತ್ರಿವಿಧ :-
ಒಂಬತ್ತನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಅರುವತ್ಮೂರು ಜನ ಪುರಾತನರು ಬಾಳಿ ಬೆಳಗಿದರು. ಇವರು ಭಿನ್ನ ಭಿನ್ನ ಜಾತಿಯವರಾಗಿದ್ದು ಕುಲದ ಕಟ್ಟು ನಿಟ್ಟು ಇಲ್ಲದವರಾಗಿದ್ದರು ತಮ್ಮ ಅಗಾಧ ಭಕ್ತಿಯಿಂದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು.ಸ ದಕ್ಷಿಣ ಭಾರತದಲ್ಲಿ ಈ ಮಹಾಪುರುಷರು ತುಂಬ ಪ್ರಸಿದ್ಧರಾಗಿದ್ದಾರೆ. ಕವಿಗಳು ಸಂಸ್ಕೃತ, ತಮಿಳು, ಕನ್ನಡ ಭಾಷೆಗಳಲ್ಲಿ ಈ ಪುರಾತನರ ಚರಿತ್ರೆಗಳನ್ನು ಬರೆದಿದ್ದಾರೆ. ಈ ಅರವತ್ಮೂರು ಪುರಾತನರಲ್ಲಿ ಪ್ರತಿಯೊಬ್ಬರ ಮೇಲೆ ಮೂರು ಸಾಲಿನ ಒಂದೊಂದು ಪದ್ಯವನ್ನು ನಿಜಗುಣರು ತಮ್ಮ “ಆರವನ್ಮೂರು ಪುರಾತನರ ತ್ರಿವಿಧಿ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆ ಮೂರು ಸಾಲಿನ ಪದ್ಯ ಅಂದರೆ ತ್ರಿಪದಿಯಲ್ಲಿ ಒಟ್ಟು ಅವರ ಸಮಗ್ರ ಪರಿಚಯವನ್ನೇ ಮಾಡಿಕೊಟ್ಟಿದ್ದಾರೆ. ಅವರಲ್ಲಿ ಬೇಡರ ಕಣ್ಣಪ್ಪನನ್ನು ಕುರಿತು ಬರೆದ ಈ ಪದ್ಯವನ್ನು ಕೇಳಿ:

ಮೃಡನ ದೃಷ್ಟಿಯಲ್ಲಿ ರುಜೆಯಡರಿತೆಂದತಿ ಭೀತಿ
ವಿಡಿದು ನಿಜಲೋಚನವಿತ್ತ ಕನ್ನಪ್ಪ
ನಡಿಗಳಂ ಪೊತ್ತು ಬಿಡದಿರ್ಪೆ


  ಇಲ್ಲಿ ಮೃಡ ಎಂದರೆ ಶಿವ, ರುಜೆ ಎಂದರೆ ರೋಗ, ನಿಜಲೋಚನ ಎಂದರೆ ತನ್ನ ಕಣ್ಣುಗಳು ಎನ್ನುವುದು ಅರ್ಥವಾದರೆ ಸಾಕು. ಅಂತ ಕನ್ನಪ್ಪನ (ಕಣ್ಣಪ್ಪ) ಅಡಿಗಳನ್ನು ಹಿಡಿದು ನಿಜಗುಣರು ಕೊಂಡಾಡಿದ್ದಾರೆ.
ಒಬ್ಬ ಬೇಡ ಅಡವಿಯಲ್ಲಿ ಬೇಟೆಯಾಡಿ, ಮಾಂಸ ತಿಂದು ಜೀವಿಸುತ್ತಿದ್ದ. ಒಂದು ದಿನ ಅವನಿಗೆ ಯಾವ ಬೇಟೆಯೂ ಸಿಕ್ಕಲಿಲ್ಲ. ಹುಡುಕುತ್ತಾ ಅಡವಿಯಲ್ಲಿ ಬಹಳ ದೂರ ಹೋದಾಗ ಶಿವದೇವಾಲಯವನ್ನು ಕಂಡ. ಪೂಜಾರಿ ದೇವರ ಪೂಜೆ ಮುಗಿಸಿ ಒಂದು ಚೂರು ನೈವೇದ್ಯವನ್ನೂ ಹಸಿದ ಬೇಡನಿಗೆ ಕೊಡದೇ ಕೀಳು ಜಾತಿಯವನೆಂದು ಅವನನ್ನು ಒಳಗೆ ಕರೆದುಕೊಳ್ಳದೆ, ಗುಡಿಯ ಬಾಗಿಲು ಹಾಕಿ ಮನೆಗೆ ಹೊರಟು ಹೋದ. ಹಸಿವಿನಿಂದ ಕಂಗೆಟ್ಟ ಬೇಡ ರಾತ್ರಿ ಗುಡಿಯ ಒಳಗೆ ನುಗ್ಗಿ ತನಗೆ ತಿಳಿದಂತೆ ಶಿವಲಿಂಗದ ಪೂಜೆ ಮಾಡಿದ. ಅವನಲ್ಲಿ ಭಕ್ತಿಯಿಂದ ಉತ್ಸಾಹ ಉಕ್ಕಿ ಮತ್ತೆ ಬೇಟೆಗೆ ಹೊರಟ. ಶಿವನಿಗೆ ನೈವೇದ್ಯ ಮಾಡಲು ಮೊಲವನ್ನು ಬೇಟೆಯಾಡಿ ತಂದ. ಅವನ ಮುಗ್ಧ ಭಕ್ತಿಗೆ ಮೆಚ್ಚಿ ಶಿವ ಅದನ್ನು ಸ್ವೀಕರಿಸಿದ. ಮುಂದೆ ಇದೇ ರೀತಿ ಶಿವಲಿಂಗ ಪೂಜೆ ಮಾಡುವುದು ಅವನ ದಿನಚರಿಯಾಯಿತು. ಶಿವನಲ್ಲಿ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಅವನ ಮುಗ್ಧ ಭಕ್ತಿಗೆ ಮೆಚ್ಚಿದ ಶಿವ ಸಂತೋಷ ಪಟ್ಟ. ಆದರೆ ಅವನನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಗುರಿ ಮಾಡಲು ನಿರ್ಧರಿಸಿದ. ಒಂದು ದಿನ ನಿತ್ಯದಂತೆ ಅವನು ಗುಡಿಗೆ ಬಂದಾಗ ಶಿವಲಿಂಗ ಎಂದಿನಂತೆ ಇರಲಿಲ್ಲ. ಲಿಂಗದ ಮೇಲೆ ಅದರ ಕಣ್ಣಿರುವ ಜಾಗದಿಂದ ಕೀವು ರಕ್ತ ಸೋರುತ್ತಿತ್ತು. ಅದನ್ನು ನೋಡಿದ ಬೇಡ ಗಾಬರಿಯಾದ. ಓಡಿ ಹೋಗಿ ಪ್ರೀತಿಯಿಂದ ರಕ್ತ, ಕೀವು ಒರೆಸಿದ. ನೀರಿನಿಂದ ತೊಳೆದ. ಮತ್ತೂ ಸೋರಹತ್ತಿತ್ತು. ಅದನ್ನು ನೋಡಿ ಬೇಡನಿಗೆ ಬಹಳ ದುಃಖವಾಯಿತು. “ಅಪ್ಪಾ ನನ್ನಪ್ಪಾ ಶಿವನೇ ನಿನ್ನ ಕಣ್ಣಿಗೆ ಏನಾಯ್ತಪ್ಪಾ” ಎಂದು ಗೋಳಾಡಿದ. ಅತ್ತ, ಕರೆದ. ಇಷ್ಟು ರಕ್ತ ಸುರಿದರೆ ಇನ್ನು ತನ್ನಪ್ಪನಿಗೆ ಕಣ್ಣು ಹೇಗೆ ಕಾಣಿಸಬೇಕು? ಎನ್ನುವ ಚಿಂತೆಯಾಯಿತು ಬೇಡನಿಗೆ. ಕೂಡಲೆ ಅವನಿಗೊಂದು ವಿಚಾರ ಹೊಳೆಯಿತು. ಬಾಣದ ತುದಿಯಿಂದ ತನ್ನ ಕಣ್ಣನ್ನು ಕಿತ್ತು ಶಿವಲಿಂಗದ ಮೇಲಿಟ್ಟ. ತನ್ನೆರಡೂ ಕಣ್ಣುಗಳು ಹೋದರೂ ಸ್ವಲ್ಪವೂ ಬಾಧೆ ತೋರಿಸದೆ, ದುಃಖಪಡದೆ ತನ್ನಪ್ಪನಿಗೆ ಕಣ್ಣು ಕಾಣಿಸಿದರೆ ಸಾಕು ಎಂದು ಸಂತೋಷಪಟ್ಟ. ಅವನ ಭಕ್ತಿಯನ್ನು ನೋಡಿದ ಶಿವನಿಗೆ ಮಮತೆ ಉಕ್ಕಿ ಬಂದಿತು. ತನ್ನ ನಿಜರೂಪ ತೋರಿಸಿದ. ಕಣ್ಣುಗಳನ್ನು ತಿರುಗಿ ಕೊಟ್ಟ. ಅವನೇ ಬೇಡರ ಕಣ್ಣಪ್ಪನೆಂದು ಹೆಸರಾದ.

ನಿಜಗುಣರ ಕೃತಿಗಳಲ್ಲಿನ  ನುಡಿಮುತ್ತುಗಳು:-
       ನಿಜಗುಣ ಶಿವಯೋಗಿಗಳು ರಾಜರು, ಕವಿಗಳು, ಸಂಗೀತ ವಿಶಾರದರು, ಜ್ಞಾನಿಗಳು, ಅನುಭಾವಿಗಳು, ಸಿದ್ಧಪುರುಷರು, ಗ್ರಂಥಕಾರರು ಎಲ್ಲವೂ ಆಗಿದ್ದರು. ಈ ರೀತಿಯಾಗಿ ಎಲ್ಲ ತೇಜೋಗುಣಗಳು ಒಬ್ಬ ವ್ಯಕ್ತಿಯಲ್ಲಿಯೇ ಸಿಕ್ಕುವುದು ತುಂಬಾ ಅಪರೂಪ. ಅವರು ಅಂಥ ಮಹಾವ್ಯಕ್ತಿಗಳಾಗಿದ್ದುದರಿಂದಲೇ ನೂರಾರು ವರ್ಷಗಳು ಕಳೆದರೂ ಜನರ ನೆನಹಿನಲ್ಲಿ ಭದ್ರವಾಗಿ ನೆಲೆಸಿದ್ದಾರೆ. ಸಣ್ಣದೊಂದು ರಾಜ್ಯವನ್ನು ತ್ಯಾಗ ಮಾಡಿ ಹೋದರೂ ನಾಡಿದ ಜನತೆಯ ಹೃದಯ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ. ಅವರ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚುವ ಕೆಲವು ನುಡಿಮುತ್ತುಗಳಿವು:
ನರಜನ್ಮದಿಂದಹದೊಳು ಮಿಗಲುಂಟೇ?
ರಾಗದಿಂ ಬೇರಿನ್ನು ಭವಬೀಜಮುಂಟೇ?
ವಿಮಲ ಮಾನಸದಿಂದೆ ಶುಭತೀರ್ಥಮುಂಟೇ?
ಕರುಣದಿಂದತಿಶಯವಹ ಧರ್ಮಮುಂಟೇ?
ಕರಣ ವಿಜದಿಂದೆ ಕಲಿತನಮುಂಟೇ?
ಕಡುಲೋಬದಿಂದೆ ದುಗುಣಮನ್ಯಮುಂಟೇ?
ಅಪವಾದದಿಂ ಮರಣವಿನ್ನುಂಟೇ?
ಚಿಂತಿಸದಿರು ಸುಖದುಃಖದೆಡೆಯೊಳು.
ಜಾಣನು ಲೌಕಿಕ ಪಾರಮಾರ್ಥವೆರಡನು ಮಾಣದೆ
ಕೂಡಿ ನಡೆಸುತಿಹನು.
ಎಲ್ಲರೊಡನೆ ವೈರವಿಲ್ಲದೆ ಕೂರ್ಪುದೆ ಚಂದಮಮ.
ತಲ್ಲಣಿಸದೆ ನಿಜದಲ್ಲಿ ತಾನಿರ್ಪುದೆ ಚಂದಮಮ.
ಧರೆಯೊಳತ್ಯಧಿಕವೆನಿಪ ಶಾಂತಿಮತವನು
ಬೇಡುವೆನಭವಾ.
ದುರಿತದೊಳಧಿಕವಾವುದು? ನಿಂದೆ.
ಜೀವನವೆರಸಿದ ಮರಣವಾವುದು? ಚಿಂತೆ.
ಕೆಡುವ ಶರೀರದ ಸಫಲವಾವುದು? ಪರಹಿತ.
ಸೆವ ಜಾಗರಣವಾವುದು? ಸದ್ವಿವೇಕ.
ಸುಧಾರಸ ಧಾರೆಯಾವುದು? ಮಿಗೆ ಮೃದುವಚನ.
ಸದುಗತಿ ಯಾವುದು? ಶಂಭುಲಿಂಗ.


ನಿಜಗುಣರ ಸ್ವತಂತ್ರ ಗ್ರಂಥವಾದ “ಕೈವಲ್ಯ ಪದ್ಧತಿ”ಯ ವೈಶಿಷ್ಟ್ಯವೇನೆಂದರೆ ಅದು ಯಾವ ಮತ, ಸಿದ್ಧಾಂತ ಇಲ್ಲವೆ ಧರ್ಮವನ್ನು ದೂಷಿಸಲು ಬರೆದದ್ದಲ್ಲ. ಶಿವಾದ್ವೈತ ಪಂಥಕ್ಕೆ ಸೇರಿದ ನಿಜಗುಣರು ವೀರಶೈವ ತತ್ವಗಳನ್ನು ಅದರಲ್ಲಿ ಪ್ರತಿಪಾದಿಸಿದ್ದಾಎ. ಅವರ ಕವಿತ್ವ ಅವರೇ ಹೇಳಿರುವಂತೆ.
“ಯೋಗಿ ನಿಜಾನಂದದೊಳು ನುಡಿಸುವ ವೀಣೆ ರಾಗ ರಸದ ತರಂಗಿಣಿ” ಯಾಗಿತ್ತು. ಆ ಗ್ರಂಥದ ಕೊನೆಯಲ್ಲಿಅವರು ಬರೆದ ಈ ಸುಂದರವಾದ ಮಂಗಳ ಪದ್ಯವನ್ನು ಕೇಳಿ:
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ.
ಮಾತು ಮನಂಗಳಿಂದತ್ತತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ.
ನಮ್ಮ ನಾಡನ ಜನರ ಮನಮನದಲ್ಲಿ ನಿಜಗುಣ ಶಿವಯೋಗಿಗಳ ನಿರ್ಮಲ ಪರಂಜ್ಯೋತಿ ಸದಾಕಾಲವೂ ಬೆಳಗುತ್ತಲೇ ಇದೆ.


**********ಹೆಚ್ಚಿನ ಮಾಹಿತಿ ಕೃಪೆ- ಕಣಜ**********