ಪುಟಗಳು

11 ಆಗಸ್ಟ್ 2014

ಅಮೆರಿಕದಲ್ಲಿ ಗೊರೂರು ಗದ್ಯಪಾಠ-2 10ನೇತರಗತಿ ಕನ್ನಡ (Americadalli Goruru 10th Kannada Lesson)



ಗೊರೂರು ರಾಮಸ್ವಾಮಿ ಅಯ್ಯಂಗಾರ್
ಶ್ರೀಯುತ ಗೊರೂರು ರಾಮಸ್ವಾಮಿ ಅಯ್ಯಂಗಾರ್ (1904 - 1991)
ಜನನ : ಜುಲೈ , ೧೯೦೪ಹಾಸನ ಜಿಲ್ಲೆಯ ಗೊರೂರು
ಮರಣ: ಸೆಪ್ಟೆಂಬರ್ , ೧೯೯೧
ವೃತ್ತಿ : ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರರು
ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.
ಶಿಕ್ಷಣ/ಜೀವನ ಮತ್ತು ಹೋರಾಟ
ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮ. ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು. ಬಳಿಕ ಮದ್ರಾಸಿನ ಲೋಕಮಿತ್ರಮತ್ತು ಭಾರತಿಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು. ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು. ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು. ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು. 1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು. 1942ರ ಚಲೇ ಜಾವ್ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು.
ಕರ್ನಾಟಕ ಏಕೀಕರಣ ಚಳುವಳಿ
·      ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತುಮಕೂರಿನ ವಿದ್ಯಾರ್ಥಿಗಳು 1941ರಲ್ಲಿ ಸ್ಥಾಪಿಸಿಕೊಂಡಿದ್ದ ಸಂಘಟನೆ - ಸನ್ಮಿತ್ರ ಸಂಘ. 16ನೆಯ ಡಿಸೆಂಬರ್ 1945, ಭಾನುವಾರ ಸಂಜೆ ತುಮಕೂರಿನ ಕೃಷ್ಣರಾಜ ಪುರಭವನ ದಲ್ಲಿ ನಡೆದ ಸನ್ಮಿತ್ರ ಸಂಘದ ಸಭೆಯಲ್ಲಿ ಗೊರೂರು ಅನುಮೋದಿಸಿದ ಗೊತ್ತುವಳಿ ಇಂತಿದೆ:
·      ಕನ್ನಡ ನಾಡಿನ ಏಕೀಕರಣಕ್ಕೆ ಸೇರಿರುವ ಈ ಸಭೆಯು, ಸಮಸ್ತ ಕನ್ನಡಿಗರೂ ಕರ್ನಾಟಕ ಏಕೀಕರಣವು ಕಾರ್ಯಕಾರಿಯಾಗಿ ರೂಪುಗೊಳ್ಳುವಂತೆ ಪೂರ್ಣ ಪ್ರಯತ್ನ ಮಾಡಬೇಕೆಂದು ಕನ್ನಡಿಗರನ್ನು ಬೇಡುತ್ತದೆ. ಕಾಂಗ್ರೆಸ್ಸಿನಿಂದ ಅಂಗೀಕೃತವಾದ ಈ ತತ್ತ್ವವನ್ನು ಕೂಡಲೇ ಕಾರ್ಯಕಾರಿಯಾಗಿ ಮಾಡಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಪಡಿಸುತ್ತದೆ.(ಆಕರ: `ಸನ್ಮಿತ್ರ ಸಂಘ'ದ ಕಾರ್ಯಕರ್ತರಾಗಿದ್ದ ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿರುವ ದಾಖಲೆ)
ಸಾಹಿತ್ಯ ಸೇವೆ
·      ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ. ಆದರೂ ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು. ಅವು ಹಲವು ದಶಕಗಳಿಂದ ಕನ್ನಡಿಗರಿಗೆ ಶುದ್ಧ ಸಂತೋಷವನ್ನೀಯುತ್ತಿವೆ. ಇಂದಿಗೂ ಅವುಗಳ ಸ್ವಾರಸ್ಯ ಬತ್ತಿಲ್ಲ. ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಗೊರೂರರು. ಹಾಗೆ ನೋಡಿದರೆ ನಮ್ಮ ಜನತೆಗೆ ನಗೆಯನ್ನು ಕಲಿಸಿದವರಲ್ಲಿ ಅವರು ಪ್ರಮುಖರು ಎನ್ನಬಹುದು.
·      ಗೊರೂರು ಗ್ರಾಮ, ಹೇಮಾವತಿ ನದಿ ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ಇದರಿಂದ ಗೊರೂರರ ವಾಙ್ಮಯಕ್ಕೆ ಪ್ರಾದೇಶಿಕ ಸ್ವರೂಪ ಪ್ರಾಪ್ತವಾಗಿದ್ದರೂ ಅವರು ಕೊಡುವ ಜೀವನ ಚಿತ್ರಣ ಪ್ರಾದೇಶಿಕವಾಗಿರುವಂತೆ ಪ್ರಾತಿನಿಧಿಕವೂ ಆಗಿದೆ.
·      ಗಾಂಧೀವಾದಿ ಗೊರೂರರ ಜಾನಪದ ಪ್ರಜ್ಞೆ ಅದ್ಭುತವಾದುದು. ಅವರು ಹೇಳುತ್ತಾರೆ: ನಾನು ಸಾಹಿತಿಗಿಂತ ಹೆಚ್ಚಾಗಿ ಜನಸಾಮಾನ್ಯರ ಮನುಷ್ಯ”, ಇದು ಅವರ ನಂಬಿಕೆ:
ಜಾನಪದ ಗುಣಗಳನ್ನೂ, ಶಕ್ತಿಯನ್ನೂ ಹೆಚ್ಚು ಹೆಚ್ಚು ನೋಡಿದಂತೆ, ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲಂತದ್ದು ಜಾನಪದವೊಂದೆ ಎಂಬ ನಂಬಿಕೆ ದೃಢವಾಗುತ್ತದೆ”. ಈ ಜಾನಪದ ಮತ್ತು ಜನಪರ ದೃಷ್ಟಿಯ ಹಿನ್ನೆಲೆಯಲ್ಲಿ ಗೊರೂರರ ಹಾಸ್ಯಪ್ರಜ್ಞೆ ಯಶಸ್ವಿಯಾಗಿ ಕೆಲಸ ಮಾಡಿದೆ.
·      ಗೊರೂರರು ತಮ್ಮ ಬರಹಗಳಲ್ಲಿ ಈಗ ಕಾಣಸಿಗದ ಅಥವಾ ತ್ವರಿತವಾಗಿ ಮರೆಯಾಗುತ್ತಿರುವ ಹಳ್ಳಿಯ ಬದುಕನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ. ಗ್ರಾಮೀಣ ಜೀವನದಲ್ಲಿ ಅವರು ಒಂದಾಗಿ ಬಾಳಿದ್ದರಿಂದ ಇದು ಸಾಧ್ಯವಾಗಿದೆ. ಅವರ ಕೃತಿಗಳಲ್ಲಿ ಕಂಡು ಬರುವ ಪಾತ್ರ ವೈವಿಧ್ಯ ಅಪಾರವಾದುದು; ಅಲ್ಲಿ ಗ್ರಾಮದ ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ ಜನರೂ ಇದ್ದಾರೆ ಹಾರುವರಿಂದ ಹರಿಜನರ ತನಕ.(ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?’ ಎಂಬ ಪ್ರಬಂಧದಲ್ಲಿ ಪ್ರಾಣಿ ಪಾತ್ರವೂ ಉಂಟು.) ಆದರೆ ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕೆಲವು ಸೂತ್ರಗಳನ್ನು ಗೊರೂರರು ಗುರುತಿಸಿ, ಅವುಗಳಿಗೆ ಒತ್ತು ಕೊಡುವುದರ ಮೂಲಕ ಸಾಮರಸ್ಯಯುತವಾದ ಒಂದು ಸಮಷ್ಟಿಯ ಚಿತ್ರವನ್ನು ಮೂಡಿಸುತ್ತಾರೆ.
·      ಅವರ ಲೆಕ್ಕಣಿ ಚಲನ ಛಾಯ ಬಿಂಬಗ್ರಾಹಿಯೂ ಆಗಿ, ಗ್ರಾಮಜೀವನದಲ್ಲಿ ಮಹತ್ವದ ಪಾತ್ರವಹಿಸುವ ಉತ್ಸವಗಳು, ಹಬ್ಬ ಹರಿದಿನಗಳು, ಜನಪದ ಕಲೆಗಳು, ಜನತೆಯಲ್ಲಿ ರೂಢವಾಗಿರುವ ಆಚಾರ ವಿಚಾರ, ನಂಬಿಕೆ ನಡಾವಳಿಗಳು ಎಲ್ಲವನ್ನೂ ಯಥಾವತ್ತಾಗಿ, ಸಜೀವವಾಗಿ ಸೆರೆ ಹಿಡಿದಿವೆ. ಗ್ರಾಮೀಣ ಸಂಸ್ಕೃತಿಯ ವಿಶ್ವರೂಪವನ್ನೇ ಅಲ್ಲಿ ಕಾಣಬಹುದು. ಗೊರೂರರ ಕೃತಿಗಳು ಬರು ಬರುತ್ತ ಹಳ್ಳಿಗಳ ಮಹಾಭಾರತಗಳೇ ಆಗುತ್ತಿವೆಎಂಬ ವಿ.ಕೃ. ಗೋಕಾಕರ ಮಾತೊಂದು ಉಲ್ಲೇಖನೀಯವಾಗಿದೆ.
·      ಗೊರೂರರ ಹಾಸ್ಯಮನೋಧರ್ಮದ ವ್ಯಕ್ತಿತ್ವದಲ್ಲಿ ಬಾಳಿನ ಬಗೆಗೆ ಉತ್ಸಾಹವಿದೆ, ನಿಷ್ಠೆಯಿದೆ; ಅವರ ಬರಹಗಳು ಈ ಗುಣಗಳನ್ನು ಓದುಗರಲ್ಲೂ ಪ್ರೇರಿಸುತ್ತವೆ. ಬೈಲಹಳ್ಳಿ ಸರ್ವೆಯ ಕಥೆಯಲ್ಲಿ, ಸರ್ವೆ ಮುಗಿದ ಮೇಲೆ ಊರಿಗೆ ಹೋದ ಮೋಜಿನಿದಾರರು ನಾಣಿಗೆ ಬರೆದ ಪತ್ರದಲ್ಲಿ ಕೊನೆಯಲ್ಲಿ ಹೀಗೆನ್ನುತ್ತಾರೆ: ನನ್ನ ಇಷ್ಟು ವರ್ಷದ ಅನುಭವದಲ್ಲಿ ನೂರಾರು ಹಳ್ಳಿಗಳನ್ನು ನೋಡಿದ್ದೇನೆ, ಅಳೆದಿದ್ದೇನೆ. ಎಲ್ಲಾ ಕಡೆಯೂ ಒಂದೇ ಸಮ, ಒಂದೇ ಗೋಳು, ಒಂದೇ ದಾರಿದ್ರ್ಯ, ಒಂದೇ ಕೊಳಕು, ಅಜ್ಞಾನ, ಬೈಲಹಳ್ಳಿಯಲ್ಲೂ ಅದೇ ಅಜ್ಞಾನ, ಅದೇ ಗೋಳು. ಆದರೆ ನಿಮ್ಮ ಉತ್ಸಾಹದಿಂದ ಆ ಗೋಳು ತಲೆ ತಗ್ಗಿಸಿತು. ಅಳುವುದಕ್ಕೆ ಸಾವಿರ ಕಾರಣವಿದ್ದೂ ನಗುವುದಕ್ಕೆ ಒಂದು ಕಾರಣವಿದ್ದರೆ ಆ ಕಾರಣವನ್ನೇ ನೀವು ಬಲಪಡಿಸಿ ನಗುತ್ತಿದ್ದೀರಿ. ನೋವು ಗೋಳುಗಳ ಹಿಂದೆ ಹೊಂಚುಹಾಕುತ್ತಿರುವ ನಗೆಯನ್ನು ಹಿಡಿಯುವುದೇ ಜೀವನದ ತಿರುಳು. ಅದೇ ನಮ್ಮ ಮುಂದಲ ಉತ್ಸಾಹಕ್ಕೆ ಕಾರಣ.ಇದು ಗೊರೂರರ ನಿಲುವೂ ಹೌದು.
·      ಗರುಡಗಂಬದ ದಾಸಯ್ಯಕೃತಿಯ ಮುನ್ನುಡಿಯಲ್ಲಿ ದ.ರಾ ಬೇಂದ್ರೆ ಹೀಗೆಂದಿದ್ದಾರೆ. ಒಬ್ಬ ಅರಸುಗಳೆ, ಹಜಾಮರೆ, ಹಾರುವರೆ, ತುರುಕರೆ, ದಾಸಯ್ಯಗಳೆ, ಬಯಲಾಟದವರೆ, ಸುಭೇಧಾರರೆ, ಶಾನುಭೋಗರೆ, ಹೊಲೆಯರೆ ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವಾದುದೆಂದು ಯಾರು ಹೇಳಲಿಕ್ಕಿಲ್ಲ?” ವರಕವಿಗಳ ಈ ಮಾತು ಗೊರೂರರ ಸಾಹಿತ್ಯಕ್ಕೆಲ್ಲಾ ಅನ್ವಯಿಸಬಹುದಾದ ಹೇಳಿಕೆಯಂತಿದೆ.
·      ಒಟ್ಟಿನಲ್ಲಿ ಕನ್ನಡಕ್ಕೆ ಗೊರೂರರ ಮುಖ್ಯವಾದ ಕೊಡುಗೆಯೇನು? ಅದನ್ನು ಕುವೆಂಪು ಅವರ ನುಡಿಗಳಲ್ಲಿ ಹೀಗೆ ಸಂಗ್ರಹಿಸಬಹುದು: ಚಾರ್ಲ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಮುಂತಾದ ಇಂಗ್ಲಿಷ್ ಲೇಖಕರ ಬರವಣಿಗೆಯನ್ನು ಓದಿ, ಅಲ್ಲಿನ ವಿವಿಧ ರೀತಿಯ ಹಾಸ್ಯವನ್ನು ಚಪ್ಪರಿಸಿದ್ದ ನಮಗೆ ಕನ್ನಡದಲ್ಲಿ ಅಂಥ ಹಾಸ್ಯದ ಅರಕೆ ದೊಡ್ಡ ಕೊರಗನ್ನೇ ಉಂಟುಮಾಡಿತ್ತು. ಆ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ.
ಕೃತಿಗಳು
ಕಾದಂಬರಿಗಳು
·    ಹೇಮಾವತಿ_(ಚಲನಚಿತ್ರ)
·    ಭೂತಯ್ಯನ ಮಗ ಅಯ್ಯು
·    ಪುನರ್ಜನ್ಮ
·   ಮೆರವಣಿಗೆ
·   ಊರ್ವಶಿ
· ಬೂತಯ್ಯನ ಮಗ ಅಯ್ಯು ಕಾದಂಬರಿಯಲ್ಲ. ಇದು ಸಣ್ಣಕತೆಯಾಗಿದ್ದು, ಕಥಾಸಂಕಲನವೊಂದರಲ್ಲಿ ಸೇರ್ಪಡೆಯಾಗಿದೆ
ಪ್ರಬಂಧ/ಕಥಾ ಸಂಕಲನಗಳು
·   ಹಳ್ಳಿಯ ಚಿತ್ರಗಳು
·   ಗರುಡಗಂಬದ ದಾಸಯ್ಯ
·   ನಮ್ಮ ಊರಿನ ರಸಿಕರು
·   ಶಿವರಾತ್ರಿ
·   ಕಮ್ಮಾರ ವೀರಭದ್ರಾಚಾರಿ
·   ಬೆಸ್ತರ ಕರಿಯ
·   ಬೆಟ್ಟದ ಸಂಪರ್ಕದ ಹೆಸರುಮನೆಯಲ್ಲಿ ಮತ್ತು ಇತರ ಕಥೆಗಳು
·   ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
·   ಗೋಪುರದ ಬಾಗಿಲು
·   ಉಸುಬು
·   ಕನ್ಯಾಕುಮಾರಿ ಮತ್ತು ಇತರ ಕಥೆ
·   ಮರೆಯಾದ ಮಾರಮ್ಮ
ಪ್ರವಾಸ ಕಥನ : ಮೆರಿಕದಲ್ಲಿ ಗೊರೂರು
ಅನುವಾದಗಳು
·    ಮಲೆನಾಡಿನವರು
·    ಭಕ್ತಿಯೋಗ
·    ಭಗವಾನ್ ಕೌಟಿಲ್ಯ
ಪ್ರಶಸ್ತಿ, ಗೌರವಗಳು
·   ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
·   ೧೯೮೦ರಲ್ಲಿ 'ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
·   ೧೯೮೨ರಲ್ಲಿ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
·   ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
·   ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
·   ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
·   ದೇವರಾಜ ಬಹದ್ದೂರ್ ಪ್ರಶಸ್ತಿ
·    ಅಭಿಮಾನಿಗಳು ಅರ್ಪಿಸಿದ ಗ್ರಂಥ- ಗೊರೂರು ಗೌರವ ಗ್ರಂಥ, ಸಂಸ್ಮರಣ ಗ್ರಂಥ , ಹೇಮಾವತಿಯ ಚೇತನ.
ನಿಧನ
  ಗೊರೂರರು ೧೯೯೧, ಸೆಪ್ಟೆಂಬರ್ ೮ರಂದು ನಿಧನರಾದರು. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು. ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲ; ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ. ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ.